SK Home Ad
Home ಸುದ್ದಿ 10 ಲಕ್ಷ ಸಣ್ಣ ವ್ಯಾಪಾರಿಗಳಿಗೆ ಅಪಾಯ.. UPI ಪಾವತಿ Re-KYC ಕಡ್ಡಾಯ; ಮಾಡದಿದ್ರೆ ಏನಾಗುತ್ತೆ ಗೊತ್ತಾ?

10 ಲಕ್ಷ ಸಣ್ಣ ವ್ಯಾಪಾರಿಗಳಿಗೆ ಅಪಾಯ.. UPI ಪಾವತಿ Re-KYC ಕಡ್ಡಾಯ; ಮಾಡದಿದ್ರೆ ಏನಾಗುತ್ತೆ ಗೊತ್ತಾ?

0
10

ನವದೆಹಲಿ: RBI ನಿಯಮಗಳ ಅಡಿಯಲ್ಲಿ ವ್ಯಾಪಾರಸ್ಥ ತಮ್ಮUPI ಪಾವತಿ Re-KYC ಸೆ.15ವರೆಗೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಫಿನ್‌ಟೆಕ್ ಉದ್ಯಮದ ಅಂದಾಜಿನ ಪ್ರಕಾರ, ಸುಮಾರು 30-35% ಸಣ್ಣ ಹಾಗೂ ಬೀದಿ ಬದಿ ವ್ಯಾಪಾರಿಗಳ KYC ಪರಿಶೀಲನೆ ಇನ್ನೂ ಪೂರ್ಣಗೊಂಡಿಲ್ಲ. Re-KYC ಮಾಡಿಕೊಳ್ಳದಿದ್ದರೆ ನಿಮ್ಮ UPI ಮೂಲಕ ಹಣ ಪಾವತಿಸಲು ತೊಂದರೆ ಹಾಗೂ ಹಣ ಸ್ವೀಕರಿಸಲು ಸಾಧ್ಯವಾಗದೇ ಇರಬಹುದು.

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ದಿನನಿತ್ಯದ ಬದುಕಿನ ಅವಿಭಾಜ್ಯ ಭಾಗವಾಗಿದೆ. ಚಹಾ ಅಂಗಡಿಯಿಂದ ಹಿಡಿದು ತರಕಾರಿ ಮಾರಾಟಗಾರರು, ಕಿರಾಣಿ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳವರೆಗೆ ಬಹುತೇಕ ಕಡೆಗಳಲ್ಲಿ QR ಕೋಡ್ ಮೂಲಕ UPI ಪಾವತಿ ಸ್ವೀಕರಿಸಲಾಗುತ್ತಿದೆ. ಆದರೆ ಇದೀಗ RBI ನಿಯಮದಡಿ ನಡೆಯಬೇಕಿರುವ Re-KYC ಪ್ರಕ್ರಿಯೆ ಸಣ್ಣ ವ್ಯಾಪಾರಿಗಳಿಗೆ ಆತಂಕ ತಂದಿದೆ.

RBI ನಿಯಮಗಳ ಪ್ರಕಾರ ಮರ್ಚೆಂಟ್‌ಗಳು ತಮ್ಮ KYC ಮಾಹಿತಿಯನ್ನು ಕಾಲಕಾಲಕ್ಕೆ ನವೀಕರಿಸಬೇಕಾಗುತ್ತದೆ. ಪ್ರಸ್ತುತ ಗಡುವಿನಂತೆ ಸೆಪ್ಟೆಂಬರ್ 15ರೊಳಗೆ Re-KYC ಪೂರ್ಣಗೊಳಿಸುವುದು ಅಗತ್ಯವಾಗಿದೆ.

ಗ್ರಾಹಕರ ಮೇಲೆ ಪರಿಣಾಮ ಏನು?
ಯಾವುದೇ ವ್ಯಾಪಾರಿಯ Re-KYC ಸಮಯಕ್ಕೆ ಪೂರ್ಣಗೊಳ್ಳದಿದ್ದರೆ, ಅವರ QR ಕೋಡ್ ಆಧಾರಿತ ಪಾವತಿ ಸೇವೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಉದಾಹರಣೆಗೆ ನೀವು ತರಕಾರಿ ಖರೀದಿಸಲು ಹೋದಾಗ ಅಂಗಡಿಯ QR ಕೋಡ್ ಕಾರ್ಯನಿರ್ವಹಿಸದಿದ್ದರೆ UPI ಮೂಲಕ ಹಣ ಪಾವತಿಸಲು ಸಾಧ್ಯವಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ನಗದು ಪಾವತಿ ಅಥವಾ ಲಭ್ಯವಿರುವ ಇತರ ಬ್ಯಾಂಕ್ ವರ್ಗಾವಣೆ ಆಯ್ಕೆಗಳನ್ನು ಬಳಸಬೇಕಾಗಬಹುದು. ಆದರೆ ಇದರಿಂದ
ದೇಶದಾದ್ಯಂತ ಎಲ್ಲ QR ಕೋಡ್‌ಗಳು ಅಥವಾ UPI ಸೇವೆ ಬಂದ್ ಆಗಲಿದೆ ಎಂದರ್ಥವಲ್ಲ. ಪರಿಣಾಮ ಮುಖ್ಯವಾಗಿ Re-KYC ಪೂರ್ಣಗೊಳಿಸದ ಸಣ್ಣ ವ್ಯಾಪಾರಿಗಳ ಮೇಲೆ ಮಾತ್ರ ಪರಿಣಾಮ ಬೀಳುವ ಸಾಧ್ಯತೆಯಿದೆ.

ಸುಮಾರು 10 ಲಕ್ಷ ವ್ಯಾಪಾರಿಗಳಿಗೆ ಅಪಾಯ?
ಉದ್ಯಮ ವಲಯದ ಅಂದಾಜಿನ ಪ್ರಕಾರ, ಸುಮಾರು 10 ಲಕ್ಷ ಸಣ್ಣ ವ್ಯಾಪಾರಿಗಳು ಈ ಪ್ರಕ್ರಿಯೆಯಿಂದ ಪರಿಣಾಮ ಎದುರಿಸುವ ಸಾಧ್ಯತೆಯಿದೆ. ನಿಗದಿತ ಗಡುವಿನೊಳಗೆ ಸುಮಾರು 80% ಪರಿಶೀಲನೆ ಮಾತ್ರ ಪೂರ್ಣಗೊಳ್ಳಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೇಮೆಂಟ್ ಎಗ್ರಿಗೇಟರ್‌ಗಳು ಮತ್ತು ಫಿನ್‌ಟೆಕ್ ಕಂಪನಿಗಳು RBIಗೆ ಗಡುವು ವಿಸ್ತರಿಸುವಂತೆ ಮನವಿ ಮಾಡಿವೆ.

ಡಿಜಿಟಲ್ ಪೇಮೆಂಟ್ ಸಂಪೂರ್ಣ ಬಂದ್ ಆಗುತ್ತಾ? ಇಲ್ಲ.
ಈ ನಿಯಮದಿಂದ ಭಾರತದ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಸ್ಥಗಿತಗೊಳ್ಳುವುದಿಲ್ಲ. ದೊಡ್ಡ ವ್ಯಾಪಾರಿಗಳು ಹಾಗೂ ಸರಿಯಾಗಿ KYC ಪೂರ್ಣಗೊಳಿಸಿರುವ ಮರ್ಚೆಂಟ್‌ಗಳ ಪಾವತಿ ವ್ಯವಸ್ಥೆಗಳು ಸಾಮಾನ್ಯವಾಗಿ ಮುಂದುವರಿಯುತ್ತವೆ.

ಆದರೆ QR ಕೋಡ್ ಪಾವತಿಯನ್ನೇ ಪ್ರಮುಖವಾಗಿ ಅವಲಂಬಿಸಿರುವ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾದರೆ, ಅವರ ವ್ಯವಹಾರ ಮತ್ತು ಗ್ರಾಹಕರ ಪಾವತಿ ಅನುಭವದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಗ್ರಾಹಕರು ಏನು ಮಾಡಬೇಕು?
ಸದ್ಯಕ್ಕೆ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. RBI ಗಡುವನ್ನು ವಿಸ್ತರಿಸುತ್ತದೆಯೇ ಅಥವಾ ಪ್ರಸ್ತುತ ಗಡುವನ್ನೇ ಮುಂದುವರಿಸುತ್ತದೆಯೇ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ. ಆದಾಗ್ಯೂ, ಸಣ್ಣ ಮಾರುಕಟ್ಟೆಗಳು, ತರಕಾರಿ ಮಂಡಿಗಳು ಅಥವಾ ಬೀದಿ ಬದಿ ವ್ಯಾಪಾರಿಗಳ ಬಳಿ ಖರೀದಿ ಮಾಡುವಾಗ ಸ್ವಲ್ಪ ನಗದು ಜೊತೆಯಲ್ಲಿ ಇಟ್ಟುಕೊಳ್ಳುವುದು ಮುನ್ನೆಚ್ಚರಿಕೆಯ ಕ್ರಮವಾಗಿ ಉಪಯುಕ್ತವಾಗಬಹುದು.

ಹೀಗಾಗಿ ಸೆಪ್ಟೆಂಬರ್ 15ರ ಗಡುವು ಸಣ್ಣ ವ್ಯಾಪಾರಿಗಳ ಪಾಲಿಗೆ ಪ್ರಮುಖವಾಗಿದ್ದು, RBI ಕೈಗೊಳ್ಳುವ ಮುಂದಿನ ನಿರ್ಧಾರಕ್ಕಾಗಿ ಫಿನ್‌ಟೆಕ್ ಉದ್ಯಮ ಹಾಗೂ ಲಕ್ಷಾಂತರ ವ್ಯಾಪಾರಿಗಳು ಕಾಯುತ್ತಿದ್ದಾರೆ.