ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ಕಾನೂನು ಹೋರಾಟ ಮತ್ತು ಜೈಲಿನ ದಿನಚರಿಯ ಕುರಿತು ಪ್ರಮುಖ ಬೆಳವಣಿಗೆಗಳು ನಡೆದಿವೆ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ನಿರಾಕರಣೆಯಾಗಿರುವ ಹಿನ್ನೆಲೆಯಲ್ಲಿ ನಟ ದರ್ಶನ್ ಕನಿಷ್ಠ ಒಂದು ವರ್ಷ ಕಾಲ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸುದೀರ್ಘ ಅವಧಿಯಲ್ಲಿ ಸಮಯ ಕಳೆಯಲು ಬೇರೆ ದಾರಿಯಿಲ್ಲದೆ ದರ್ಶನ್ ಈಗ ಪುಸ್ತಕಗಳ ಮೊರೆ ಹೋಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಹ ಕೈದಿಗಳೊಂದಿಗೆ ಬ್ಯಾರಕ್ ಹಂಚಿಕೊಂಡಿದ್ದು, ವಾರಕ್ಕೆ 2 ರಿಂದ 3 ಪುಸ್ತಕಗಳನ್ನು ಓದುತ್ತಿದ್ದಾರೆ ಎನ್ನಲಾಗಿದೆ. ಇತ್ತ ಎ1 ಆರೋಪಿ ಪವಿತ್ರಾ ಗೌಡ ಜೈಲಿನಲ್ಲಿ ಬರವಣಿಗೆಯಲ್ಲಿ ನಿರತರಾಗಿದ್ದಾರೆ.
ಇನ್ನೂ ಪ್ರಕರಣದ ಐವರು ಪ್ರಮುಖ ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್, ವಿನಯ್ ಮತ್ತು ಧನರಾಜ್ ಈ ಎಲ್ಲರಿಗೂ ಸೆಷನ್ಸ್ ಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಬೇಕೆಂದು ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಆರೋಪಿಗಳು ಹೊರಗಿದ್ದರೆ ಸಾಕ್ಷ್ಯ ನಾಶಪಡಿಸಬಹುದು ಎಂಬ ವಾದವನ್ನು ಒಪ್ಪದ ಹೈಕೋರ್ಟ್, ಅವರಿಗೆ ನೀಡಲಾಗಿದ್ದ ಜಾಮೀನನ್ನು ಎತ್ತಿಹಿಡಿದಿದೆ. ಈ ತೀರ್ಪು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಿರಿಯ ವಕೀಲ ರಂಗನಾಥ್ ರೆಡ್ಡಿ ಪ್ರಕಾರ, ಹೈಕೋರ್ಟ್‌ನ ಈ ಸಕಾರಾತ್ಮಕ ಆದೇಶದ ಲಾಭ ನಟ ದರ್ಶನ್‌ಗೆ ಸಿಗುವುದು ಅನುಮಾನ. ದರ್ಶನ್ ಪರ ವಕೀಲರು ಅವಸರಪಟ್ಟು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಿಂದ ಹಿನ್ನಡೆ ಅನುಭವಿಸಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟ್‌ಗೆ ಹೋಗದೆ ಕಾಯ್ತಿದ್ದರೆ, ಹೈಕೋರ್ಟ್‌ನ ಈ ಇತ್ತೀಚಿನ ತೀರ್ಪಿನ ಆಧಾರದ ಮೇಲೆ ಈಗ ಸುಲಭವಾಗಿ ಜಾಮೀನು ಪಡೆದುಕೊಳ್ಳಬಹುದಿತ್ತು ಎಂದು ರಂಗನಾಥ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಒಂದು ವರ್ಷದೊಳಗೆ ಮುಗಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.





















