SK Home Ad
Home ನಮ್ಮ ಜಿಲ್ಲೆ ಕಲಬುರಗಿ ಸರ್ಕಾರಿ ಅಭಿಯೋಜಕರಿಗೆ ಲಂಚ ನೀಡಲು ಯತ್ನ: ಇಬ್ಬರ ಬಂಧನ

ಸರ್ಕಾರಿ ಅಭಿಯೋಜಕರಿಗೆ ಲಂಚ ನೀಡಲು ಯತ್ನ: ಇಬ್ಬರ ಬಂಧನ

0
82

ಸಂ.ಕ.ಸಮಾಚಾರ ​ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣವೊಂದನ್ನು ಸುಗಮಗೊಳಿಸಲು ಹಾಗೂ ಆರೋಪಿಗೆ ಸಹಾಯ ಮಾಡುವ ಉದ್ದೇಶದಿಂದ ಸರ್ಕಾರಿ ಅಭಿಯೋಜಕರಿಗೆ ಲಂಚ ನೀಡಲು ಯತ್ನಿಸಿದ ಇಬ್ಬರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ 2ನೇ ಅಪರ ಜಿಲ್ಲಾ ಮತ್ತು ಸತ್ರ (ಎಸ್.ಸಿ/ಎಸ್.ಟಿ) ನ್ಯಾಯಾಲಯದಲ್ಲಿ ಆಳಂದ ಪೊಲೀಸ್ ಠಾಣೆಗೆ ಸಂಬಂಧಿಸಿದ ಪ್ರಕರಣವೊಂದು ವಿಚಾರಣಾ ಹಂತದಲ್ಲಿತ್ತು. ಈ ಪ್ರಕರಣದಲ್ಲಿ ಆರೋಪಿತರಿಗೆ ಸಹಾಯ ಮಾಡಲು ಹಾಗೂ ಪ್ರಕರಣವನ್ನು ತಮ್ಮ ಪರವಾಗಿ ಮಾಡಿಕೊಳ್ಳುವ ಸಲುವಾಗಿ, ಆರೋಪಿಯ ಪರವಾಗಿ ಅವರ ಅಣ್ಣ ಸಂಜೀವನ್ ದತ್ತಾಜಿ ಪಾಟೀಲ್ (80) ಮತ್ತು ಆತನ ಮಗ ಸುರೇಶ ಸಂಜೀವನ್ ಪಾಟೀಲ್ (44) ಅವರು ಸರ್ಕಾರಿ ಅಭಿಯೋಜಕರಾದ ಪ್ರಾಣೇಶ ಭರತನೂರ ಅವರಿಗೆ 5,000 ರೂಪಾಯಿ ಲಂಚ ನೀಡಲು ಯತ್ನಿಸಿದ್ದಾರೆ.

ಇದನ್ನೂ ಓದಿ: ಪಂಚ ಗ್ಯಾರಂಟಿ ನಿಲ್ಲಲ್ಲ: ವಿಪಕ್ಷಗಳ ಆರೋಪಕ್ಕೆ ಮಾಜಿ CM ತಿರುಗೇಟು

ಈ ಬಗ್ಗೆ ಮಾಹಿತಿ ಅರಿತಿದ್ದ ಲೋಕಾಯುಕ್ತ ಅಧಿಕಾರಿಗಳು, ನಿಗಧಿತ ಸ್ಥಳದಲ್ಲಿ ಕಾಯುತ್ತಿದ್ದರು. ಆರೋಪಿಗಳು ಲಂಚದ ಹಣವನ್ನು ಕವರ್‌ನಲ್ಲಿಟ್ಟು ನೀಡಲು ಮುಂದಾದಾಗ ಲೋಕಾಯುಕ್ತ ತಂಡವು ಅವರನ್ನು ಕೈಬೆಚ್ಚಗೆ ಹಿಡಿದು ವಶಕ್ಕೆ ಪಡೆದುಕೊಂಡಿದೆ.

ಕರ್ನಾಟಕ ಲೋಕಾಯುಕ್ತ ಕಲಬುರಗಿಯ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತ ತನಿಖಾಧಿಕಾರಿ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ರಾಜಶೇಖರ ಬಡದೇಸಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಅರುಣ್ ಕುಮಾರ್, ರವಿ ಪವರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಮದುವೆ ಹೆಸರಿನಲ್ಲಿ ವಂಚನೆ? ಕಾಂಗ್ರೆಸ್ ನಾಯಕಿ ವಿರುದ್ಧ ಆರೋಪ

​ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆಯ ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.