SK Home Ad
Home ಸುದ್ದಿ ದೇಶ ಕೆಮ್ಮಿನ Syrups ಮಾರಾಟಕ್ಕೆ ಬ್ರೇಕ್: ಕೇಂದ್ರದ ಕಟ್ಟುನಿಟ್ಟಿನ ಕ್ರಮ

ಕೆಮ್ಮಿನ Syrups ಮಾರಾಟಕ್ಕೆ ಬ್ರೇಕ್: ಕೇಂದ್ರದ ಕಟ್ಟುನಿಟ್ಟಿನ ಕ್ರಮ

0
74

ಕೆಮ್ಮಿನ ಸಿರಪ್ ಮೇಲೆ ಕೇಂದ್ರದ ಕಟ್ಟುನಿಟ್ಟಿನ ಕ್ರಮ; ಸಾರ್ವಜನಿಕರಿಗೆ ಏನು ಬದಲಾವಣೆ?

ನವದೆಹಲಿ: ದೇಶದಲ್ಲಿ ಕೆಮ್ಮಿನ ಸಿರಪ್‌ಗಳ ಮಾರಾಟ ಮತ್ತು ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಮತ್ತಷ್ಟು ಕಠಿಣಗೊಳಿಸಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲದೆ ಖರೀದಿಸಬಹುದಾಗಿದ್ದ ಔಷಧಿಗಳ ಪಟ್ಟಿಯಾದ Schedule K ಯಿಂದ ಕೆಮ್ಮಿನ ಸಿರಪ್‌ಗಳನ್ನು ತೆಗೆದುಹಾಕುವ ಮೂಲಕ ಮಹತ್ವದ ತಿದ್ದುಪಡಿ ಜಾರಿಗೆ ತರಲಾಗಿದೆ.

ಈ ತಿದ್ದುಪಡಿಯೊಂದಿಗೆ ಇನ್ಮುಂದೆ ಯಾವುದೇ ರೀತಿಯ ಕೆಮ್ಮಿನ ಸಿರಪ್ ಖರೀದಿಸಲು ನೋಂದಾಯಿತ ವೈದ್ಯಕೀಯ ವೈದ್ಯರ (Registered Medical Practitioner) ಪ್ರಿಸ್ಕ್ರಿಪ್ಷನ್ ಕಡ್ಡಾಯವಾಗಲಿದೆ. ಆದರೆ ಕೆಮ್ಮಿಗೆ ಬಳಸುವ ಲೋಜೆಂಜ್‌ಗಳು (Lozenges), ಮಾತ್ರೆಗಳು ಹಾಗೂ ಟ್ಯಾಬ್ಲೆಟ್‌ಗಳು ಹಿಂದಿನಂತೆ Schedule K ಪಟ್ಟಿಯಲ್ಲೇ ಮುಂದುವರಿಯಲಿದ್ದು, ಅವುಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

ಇದನ್ನೂ ಓದಿ: NTA ಶಿಫಾರಸಿನ ಮೇರೆಗೆ Telegram ಸೇವೆಗೆ ತಾತ್ಕಾಲಿಕ ನಿರ್ಬಂಧ

ಕೇಂದ್ರ ಸರ್ಕಾರ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಈ ಕುರಿತು ಕರಡು ಅಧಿಸೂಚನೆ ಪ್ರಕಟಿಸಿ ಸಾರ್ವಜನಿಕರು ಹಾಗೂ ಸಂಬಂಧಿತ ವಲಯಗಳ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಬಳಿಕ ಬಂದ ಸಲಹೆಗಳನ್ನು ಪರಿಗಣಿಸಿ ಇದೀಗ ಅಂತಿಮ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ.

ಈ ಕ್ರಮದ ಹಿಂದೆ ಮಕ್ಕಳ ಸಾವಿಗೆ ಕಾರಣವಾದ ಕಲುಷಿತ ಕೆಮ್ಮಿನ ಸಿರಪ್ ಪ್ರಕರಣಗಳು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವನೆಯಿಂದ ಕನಿಷ್ಠ 22 ಮಕ್ಕಳು ಮೃತಪಟ್ಟಿದ್ದ ಘಟನೆ ದೇಶಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಇದೇ ವೇಳೆ ರಾಜಸ್ಥಾನದಲ್ಲಿಯೂ ಮಕ್ಕಳ ಸಾವಿನ ಪ್ರಕರಣಗಳು ವರದಿಯಾಗಿದ್ದವು.

ಇದನ್ನೂ ಓದಿ: ಇದನ್ನೂ ಓದಿ: ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ವಿಜಯನಗರದಲ್ಲಿ ಲೋಕಾಯುಕ್ತ ದಾಳಿ

ಆರೋಗ್ಯ ತಜ್ಞರ ಪ್ರಕಾರ, ಕೆಲವು ಕೆಮ್ಮಿನ ಸಿರಪ್‌ಗಳಲ್ಲಿ ಕೊಡೈನ್ (Codeine) ಸೇರಿದಂತೆ ವ್ಯಸನಕಾರಿ ಗುಣಲಕ್ಷಣಗಳನ್ನು ಹೊಂದಿರುವ ಅಂಶಗಳಿರುತ್ತವೆ. ಇಂತಹ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ಬಳಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಜೊತೆಗೆ ಅಕ್ರಮ ಬಳಕೆ ಮತ್ತು ದುರುಪಯೋಗದ ಸಾಧ್ಯತೆಯೂ ಹೆಚ್ಚಿರುತ್ತದೆ.

ಹೊಸ ನಿಯಮ ಜಾರಿಯಾದ ಬಳಿಕ ಜನರು ಇನ್ಮುಂದೆ ನೇರವಾಗಿ ಔಷಧ ಅಂಗಡಿಗೆ ತೆರಳಿ ಕೆಮ್ಮಿನ ಸಿರಪ್ ಖರೀದಿಸಲು ಸಾಧ್ಯವಾಗುವುದಿಲ್ಲ. ವೈದ್ಯರ ಪರೀಕ್ಷೆ ಮತ್ತು ಪ್ರಿಸ್ಕ್ರಿಪ್ಷನ್ ಪಡೆದ ನಂತರವೇ ಔಷಧ ವಿತರಕರು ಕೆಮ್ಮಿನ ಸಿರಪ್ ನೀಡಬೇಕಾಗುತ್ತದೆ.

ಇದನ್ನೂ ಓದಿ: ನಿವೃತ್ತಿಯ ಬೆನ್ನಲ್ಲೇ ಲೋಕಾಯುಕ್ತ ಶಾಕ್: ಮಾಜಿ ಕಚೇರಿ ಅಧೀಕ್ಷಕ ಮನೆ ಸೇರಿ 5 ಕಡೆ ದಾಳಿ

ಆರೋಗ್ಯ ಸಚಿವಾಲಯದ ಈ ಕ್ರಮವು ಔಷಧಿಗಳ ಸುರಕ್ಷಿತ ಬಳಕೆ, ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ಔಷಧ ದುರುಪಯೋಗ ನಿಯಂತ್ರಣದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.