Home Advertisement
Home ನಮ್ಮ ಜಿಲ್ಲೆ ಗದಗ ರೋಣ ತಾಲ್ಲೂಕಿನ PDO ಮಕ್ತುಮ ಹುಸೇನ ಆತ್ಮಹತ್ಯೆ

ರೋಣ ತಾಲ್ಲೂಕಿನ PDO ಮಕ್ತುಮ ಹುಸೇನ ಆತ್ಮಹತ್ಯೆ

0
148

ಗದಗ: ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿ ಮತ್ತು ಕೊತಬಾಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಕ್ತುಮ ಹುಸೇನ ಕರಡಿಗುಡ್ಡ (46) ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಧಾರವಾಡ ಜಿಲ್ಲೆಯವರಾದ ಮಕ್ತುಮ್ ಹುಸ್ಸೇನ ಅವರು ಇತ್ತೀಚೆಗೆ, ಅಂದರೆ ಕಳೆದ ತಿಂಗಳಷ್ಟೇ ಕೊತಬಾಳ ಗ್ರಾಮ ಪಂಚಾಯಿತಿಯ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಕಾಲಿಕ ಸಾವಿನಿಂದ ಕುಟುಂಬದವರು ಮತ್ತು ಸ್ಥಳೀಯರು ಶೋಕಕ್ಕೆ ಒಳಗಾಗಿದ್ದಾರೆ.

ಆತ್ಮಹತ್ಯೆಗೆ ಕಾರಣ ಸ್ಪಷ್ಟವಿಲ್ಲ : ಈ ದುರ್ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ 2022-23ನೇ ಸಾಲಿನಲ್ಲಿ ಇವರ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಆ ಪ್ರಕರಣದ ಬಗ್ಗೆ ಅವರು ಮಾನಸಿಕ ಒತ್ತಡದಲ್ಲಿದ್ದರು ಎಂಬ ಮಾಹಿತಿ ಕುಟುಂಬದ ಸದಸ್ಯರಿಂದ ತಿಳಿದು ಬಂದಿದೆ. ಈ ವಿಷಯವನ್ನು ಅವರು ಮನಸ್ಸಿಗೆ ತುಂಬಾ ಹಚ್ಚಿಕೊಂಡಿದ್ದರು ಎಂದು ಹೇಳಲಾಗಿದೆ.

ಘಟನೆ ಬೆಳಕಿಗೆ ಬಂದದ್ದು ಹೇಗೆ? : ಕಳೆದ ಎರಡು ದಿನಗಳಿಂದ ಪತ್ನಿಯ ಕರೆಗಳಿಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಪತ್ನಿ, ಮಕ್ತುಮ್ ಹುಸ್ಸೇನ ವಾಸಿಸುತ್ತಿದ್ದ ಬಾಡಿಗೆ ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರಿಸಲು ಹೇಳಿದ್ದಾರೆ. ಮನೆಗೆ ತೆರಳಿ ಪರಿಶೀಲಿಸಿದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಅವರ ಕುಟುಂಬದ ಮೇಲೆ ದುಃಖದ ನೆರಳು ಆವರಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.