SK Home Ad
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಉಪರಾಷ್ಟ್ರಪತಿ ಭೇಟಿ ಹಿನ್ನೆಲೆ ಬಿಗಿ ಭದ್ರತೆ, ವ್ಯಾಪಾರ ವಹಿವಾಟು ತಾತ್ಕಾಲಿಕ ಸ್ಥಗಿತ

ದಾವಣಗೆರೆ: ಉಪರಾಷ್ಟ್ರಪತಿ ಭೇಟಿ ಹಿನ್ನೆಲೆ ಬಿಗಿ ಭದ್ರತೆ, ವ್ಯಾಪಾರ ವಹಿವಾಟು ತಾತ್ಕಾಲಿಕ ಸ್ಥಗಿತ

0
112

CM ಗೈರು ಹಾಜರಿ ನಡುವೆ ಯುಬಿಡಿಟಿ ವಜ್ರ ಮಹೋತ್ಸವಕ್ಕೆ ಸಿದ್ಧತೆ ಪೂರ್ಣ

ದಾವಣಗೆರೆ: ನಗರದ ಪ್ರತಿಷ್ಠಿತ (UBDT) ಇಂಜಿನಿಯರಿಂಗ್ ಕಾಲೇಜಿನ 75ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಭದ್ರತಾ ದೃಷ್ಟಿಯಿಂದ ಉಪರಾಷ್ಟ್ರಪತಿಗಳು ಸಂಚರಿಸುವ ಪ್ರಮುಖ ಮಾರ್ಗಗಳಲ್ಲಿ ಝಿರೋ ಟ್ರಾಫಿಕ್ ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ವಾಹನ ಸಂಚಾರ ಹಾಗೂ ವ್ಯಾಪಾರ ಚಟುವಟಿಕೆಗಳ ಮೇಲೂ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ನಗರದ ಜಿಎಂಐಟಿ ರಸ್ತೆ, ಕಾಲೇಜು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಭದ್ರತಾ ವಲಯಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ನಿಗಾವಹಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಪ್ರವಾಸ ಆರಂಭಿಸಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್

ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶುಕ್ರವಾರ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಆಗಮಿಸಿದರು. ಈ ವೇಳೆ ಅವರಿಗೆ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಗಣ್ಯರು ಆತ್ಮೀಯ ಸ್ವಾಗತ ಕೋರಿದರು.ಅಲ್ಲಿಂದ ವಿಶೇಷ ವಿಮಾನದ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ, ಬಳಿಕ ಹೆಲಿಕಾಪ್ಟರ್ ಮೂಲಕ ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ.

ಉಪರಾಷ್ಟ್ರಪತಿ ಭೇಟಿ ಹಿನ್ನೆಲೆ ಹಲವು ಕಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಭದ್ರತಾ ಸಿಬ್ಬಂದಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ. ಮಾರ್ಗದಲ್ಲಿರುವ ಅಂಗಡಿ-ಮುಂಗಟ್ಟುಗಳ ವ್ಯಾಪಾರಿಗಳು ತಾತ್ಕಾಲಿಕವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದು, ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲರಿಂದ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ

1951ರಲ್ಲಿ ಸ್ಥಾಪನೆಯಾದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಕರ್ನಾಟಕದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಕಾಲೇಜಿನ 75ನೇ ವರ್ಷದ ವಜ್ರ ಮಹೋತ್ಸವವನ್ನು ಮೇ 29 ಮತ್ತು 30ರಂದು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ನಿಧನ

ಉಪರಾಷ್ಟ್ರಪತಿಯ ಭೇಟಿ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಸಾರ್ವಜನಿಕರು ಪೊಲೀಸರ ಸೂಚನೆ ಪಾಲಿಸುವಂತೆ ಮನವಿ ಮಾಡಲಾಗಿದೆ.