SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸಿಲಿಂಡರ್‌ಗಳ ಸ್ಫೋಟ ಪ್ರಕರಣ: ಮೂವರ ವಿರುದ್ಧ FIR ದಾಖಲು

ಸಿಲಿಂಡರ್‌ಗಳ ಸ್ಫೋಟ ಪ್ರಕರಣ: ಮೂವರ ವಿರುದ್ಧ FIR ದಾಖಲು

0
98

ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹ ಆರೋಪ; ಅಡಿಕೆ ತೋಟದ ಗೋದಾಮು ಪ್ರಕರಣಕ್ಕೆ ಹೊಸ ತಿರುವು

ದಾವಣಗೆರೆ: ತಾಲೂಕಿನ ಎಚ್. ಕಲ್ಪನಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿದ್ದ ಸಿಲಿಂಡರ್ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಅನಿಲ್, ಅಡಿಕೆ ಸಂಸ್ಕರಣ ಘಟಕದ ಮಾಲೀಕ ದೊಗ್ಗಳ್ಳಿ ಶಿವಕುಮಾರ್ ಹಾಗೂ ಜ್ಯೋತಿ ಏಜೆನ್ಸಿ ವಿರುದ್ಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕ ರಾಘವೇಂದ್ರ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: BJP ಗೆಲುವಿನ ವಿರುದ್ಧ TMC ನಾಯಕಿಯ ಕಾನೂನು ಸಮರ

ಪ್ರಕರಣವನ್ನು ಅಗತ್ಯ ವಸ್ತುಗಳ ಕಾಯ್ದೆ (Essential Commodities Act) ಅಡಿ ದಾಖಲಿಸಲಾಗಿದ್ದು, ಜೊತೆಗೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 288ರಡಿ ನಿರ್ಲಕ್ಷ್ಯದಿಂದ ಅಪಾಯಕಾರಿಯಾದ ವಸ್ತುಗಳನ್ನು ಸಂಗ್ರಹಿಸಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡಿದ ಆರೋಪವನ್ನೂ ಸೇರಿಸಲಾಗಿದೆ. ಅಲ್ಲದೆ ಎಲ್‌ಪಿಜಿ ಕಾಯ್ದೆಯಡಿ ಕೂಡ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಮಾನ್ಯ ಲೈಸೆನ್ಸ್ ಇಲ್ಲದೆ ಗ್ಯಾಸ್ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಇದೇ ಕಾರಣದಿಂದ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ಸಿಕ್ಕಿದ್ದು, ವಿವಿಧ ಇಲಾಖೆಗಳು ತನಿಖೆಯಲ್ಲಿ ತೊಡಗಿವೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ!

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಮಾಹಿತಿ ನೀಡಿ, ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಸಿಲಿಂಡರ್‌ಗಳು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು, ಅವುಗಳಲ್ಲಿ ಯಾವ ರೀತಿಯ ಗ್ಯಾಸ್ ಇತ್ತು ಹಾಗೂ ಸಂಗ್ರಹಣೆ ಕಾನೂನುಬದ್ಧವಾಗಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಗ್ನಿ ಅವಘಡದ ಕಾರಣ ಮತ್ತು ಹೊಣೆಗಾರಿಕೆ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ದಾಖಲೆಗಳ ಪರಿಶೀಲನೆ ಬಳಿಕ ತಪ್ಪಿತಸ್ಥರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕೇರಳದಲ್ಲಿ ನಿಫಾ ಆತಂಕ : ಸೋಂಕಿತನಿಗೆ ವೆಂಟಿಲೇಟರ್ ಬೆಂಬಲ

ಈ ಘಟನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದು, ವಸತಿ ಹಾಗೂ ಕೃಷಿ ಪ್ರದೇಶಗಳ ಸಮೀಪದಲ್ಲಿ ಅಪಾಯಕಾರಿಯಾದ ವಸ್ತುಗಳನ್ನು ಅನಧಿಕೃತವಾಗಿ ಸಂಗ್ರಹಿಸುವ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಿತ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.