Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಆರಂಭದಲ್ಲಿಯೇ ವಿಘ್ನ, ಓಪನ್ ಆಗದ ಸ್ಟ್ರಾಂಗ್ ರೂಮ್!

ದಾವಣಗೆರೆ: ಆರಂಭದಲ್ಲಿಯೇ ವಿಘ್ನ, ಓಪನ್ ಆಗದ ಸ್ಟ್ರಾಂಗ್ ರೂಮ್!

0
54

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಗರದ ಹಳೆಯ ಪಿ.ಬಿ.ರಸ್ತೆಯಲ್ಲಿರುವ ಡಿಆರ್ ಆರ್ ಶಾಲೆಯಲ್ಲಿ ಸೋಮವಾರ ನಡೆಯುತ್ತಿದ್ದು, ಸ್ಟ್ರಾಂಗ್ ರೂಂ ಒಪನ್ ಮಾಡಲು ಕೆಲಕಾಲ ಹರಸಹಾಸ ಮಾಡಲಾಯಿತು.

ಬೆಳಗ್ಗೆ ಸರಿಯಾಗಿ 7.36ರ ಸುಮಾರಿನಲ್ಲಿ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಚುನಾವಣಾಧಿಕಾರಿ ಸಂತೋಷ್ ಕುಮಾರ್, ಚುನಾವಣಾ ವೀಕ್ಷಕರಾದ ಕುಮಾರ್ ರಮಣಿಕಾಂತ್ , ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್, ಎಸ್ಪಿ ಡಾ.ಎಚ್.ಟಿ.ಶೇಖರ್ ಸಮ್ಮುಖದಲ್ಲಿ ಸ್ಟ್ರಾಂಗ್ ಓಪನ್ ಮಾಡಲು ಚಾಲನೆ ನೀಡಿದರು.

ಆದರೆ ಮತಯಂತ್ರಗಳು ಇರುವ ರೂಮ್ ನಂಬರ್ 1, 2, 3ರ ಬೀಗದ ಕೀ ಸಿಗದ ಹಿನ್ನೆಲೆಯಲ್ಲಿ ಬಾಗಿಲು ತೆಗೆಯಲು ಹರಸಾಹಸ ಮಾಡಲಾಯಿತು. 7.36 ರಿಂದ 7.46 ರವರೆಗೆ ಕೀ ಗೊಂಚಲು ತಡಕಾಡಿದರೂ ರೂಂ ನಂಬರ್ 1ರ ಬೀಗದ ಕೀ ಸಿಗಲೇ ಇಲ್ಲ. ಕೊನೆಗೆ ಸುತ್ತಿಗೆ ಬಳಸಿ ಬೀಗ ಹೊಡೆದು ರೂಂ ಬಾಗಿಲ್ ಓಪನ್ ಮಾಡಲಾಯಿತು.

ಸಿಬ್ಬಂದಿಗೆ ಜಿಲ್ಲಾ ಚುನಾವಣಾಧಿಕಾರಿ ತರಾಟೆ: ಮೂರು ಸ್ಟ್ರಾಂಗ್ ರೂಮ್‌ಗಳ ಬೀಗದ ಕೀಗಳು ಸಿಗದೆ ಸಿಬ್ಬಂದಿ ಪರದಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಿಬ್ಬಂದಿ ವಿರುದ್ಧ ತರಾಟೆಗೆ ತೆಗೆದುಕೊಂಡರು.

ಮತಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಮ್‌ಗಳು ಸ್ಟ್ರಾಂಗ್ ಆಗಿಯೇ ಇರಬೇಕು ಎಂಬುದಕ್ಕೆ ಈ ಬೀಗದ ಕೀಗಳೇ ಸಾಕ್ಷಿಯಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುನುಗಿದರು.

ಗಲಿಬಿಲಿಗೊಂಡ ಸಿಬ್ಬಂದಿ: ಸ್ಟ್ರಾಂಗ್ ರೂಮ್ ಓಪನ್ ಮಾಡುವ ಸಂದರ್ಭದಲ್ಲಿ ಎದುರುಗಡೆ ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾಧಿಕಾರಿಗಳು, ಚುನಾವಣಾ ವೀಕ್ಷಕರು ಇದ್ದಿದ್ದರಿಂದ ಬೀಗದ ಕೀ ತೆಗೆಯುವ ಸಿಬ್ಬಂದಿ ಗಲಿಬಿಲಿಗೊಂಡರು.

ಮೊಬೈಲ್ ಶೂನಲ್ಲಿ ಇಟ್ಟುಕೊಂಡು ಬಂದಿದ್ದ ಬಿಜೆಪಿ ಮುಖಂಡ: ಮತ ಎಣಿಕೆ ಕೇಂದ್ರಕ್ಕೆ ಪಕ್ಷದ ಪರವಾಗಿ ಮತ ಎಣಿಕೆ ಏಜೆಂಟರ್ ಆಗಿ ಬಂದಿದ್ದ ಬಿಜೆಪಿ ಮುಖಂಡರೊಬ್ಬರೂ ಶೂನಲ್ಲಿ ಮೊಬೈಲ್ ಇಟ್ಟುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಪೊಲೀಸರು ತಪಾಸಣೆ ಮಾಡುವಾಗ ಶೂ ನಲ್ಲಿ ಮೊಬೈಲ್ ಇಟ್ಟುಕೊಂಡು ಬಂದಿರುವುದು ಪತ್ತೆಯಾಯಿತು. ನಾನು ತಂದಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದ ಮುಖಂಡನನ್ನು ಎಸ್ಪಿ ಡಾ.ಎಚ್.ಟಿ. ಶೇಖರ್ ಹೊರ ಕಳುಹಿಸಿ ಮೊಬೈಲ್ ತರದಂತೆ ತಾಕೀತು ಮಾಡಿದರು.

ವಿಳಂಬವಾದ ಮತ ಎಣಿಕೆ ಕಾರ್ಯ: ಸ್ಟ್ರಾಂಗ್ ರೂಮ್‌ಗಳ ಬೀಗದ ಕೀಗಳು ಓಪನ್ ಆಗದ ಕಾರಣ 7.30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾಗಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಬೇಕಿತ್ತು. ಆದರೆ ಸ್ಟ್ರಾಂಗ್ ರೂಮ್‌ಗಳ ಬೀಗದ ಕೀಗಳು ಓಪನ್ ಆಗದ ಕಾರಣ 8.20ರಿಂದ ಮತ ಎಣಿಕೆ ಕಾರ್ಯ ಆರಂಭವಾಯಿತು.