ಕಡೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಒಕ್ಕಲಿಗ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಅವಕಾಶ ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಡಿ.ಕೆ. ಶಿವಕುಮಾರ್ ಪಾತ್ರವೇ ಹೆಚ್ಚಿನದು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸೋನಿಯಾ ಗಾಂಧಿಯವರಿಗೆ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಲಾಭವೇನು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದ್ದರು, ಒಕ್ಕಲಿಗ ಮುಖಂಡರು ಸಿದ್ದರಾಮಯ್ಯನವರಿಗೆ ಬೆಂಬಲ ನೀಡಿದ್ದರು, ಈಗ ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಿರುವುದು ಸಾಮರಸ್ಯದ ರಾಜಕಾರಣ ಆಗಲಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಯಾವುದೇ ಒಂದು ಜಾತಿಯ ಮತಗಳಿಂದ ಗೆಲ್ಲಲು ಸಾಧ್ಯವಿಲ್ಲ, ಎಲ್ಲಾ ಜಾತಿ ಜನಾಂಗ ಎಲ್ಲ ಧರ್ಮದವರ ಸಹಕಾರದಿಂದ ಮಾತ್ರ ಗೆಲ್ಲಲು ಸಾಧ್ಯ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಅವರು ಸಮರ್ಥವಾಗಿ ನಿಭಾಯಿಸುತ್ತಾರೆ, ಜನರ ಜೊತೆಯಲ್ಲಿ ಬೆರೆಯುವ ಪಕ್ಷಗಳು ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು, ಜನರ ಜೊತೆಯಲ್ಲಿ ಬೆರೆಯದ ಪಕ್ಷ ಬಿಜೆಪಿ ಧರ್ಮ, ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ, ಜನತೆ ಇವರಿಗೆ ಲೆಕ್ಕಕ್ಕಿಲ್ಲ. ಅಕ್ಷರ, ಅನ್ನ ಜನರಿಗೆ ಅವಶ್ಯ, ಧರ್ಮವನ್ನು ಇಟ್ಟುಕೊಂಡು ಇನ್ನೂ ಎಷ್ಟು ದಿನ ರಾಜಕಾರಣ ಮಾಡುತ್ತೀರಿ. ಜನರ ಜೊತೆಯಲ್ಲಿ ಬೆರೆಯುವುದನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.






















