ಚಿಕ್ಕಮಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಹಿಂದಿರುವ ಉದ್ದೇಶವೇನು? ಜೊತೆಗೆ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಮೇಲೆ ಯಾವ ಕಾರಣಕ್ಕೆ ಅಪಪ್ರಚಾರ ನಡೆಸಿದರು ಎಂಬ ಬಗ್ಗೆಯೂ ಸುಮೊಟೊ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುರುಡೆ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಎಲ್ಲಿ ಇಡಬೇಕಿತ್ತೋ ಅಲ್ಲಿಯೇ ಇಡಬೇಕಿತ್ತು. ಆದರೆ ಅವರನ್ನು ಚುನಾವಣಾ ಪ್ರಚಾರದಲ್ಲಿ ಬಳಕೆ ಮಾಡಿಕೊಂಡರು. ಅಂತ ವ್ಯಕ್ತಿಗಳ ವಿರುದ್ಧ ಸರ್ಟಿಫಿಕೇಟ್ ಕೊಡುವ ಕೆಲಸವನ್ನು ಗೃಹ ಸಚಿವರು ಮಾಡಬಾರದು. ತನಿಖೆ ನಡೆಯುವ ಮೊದಲೇ ಸರ್ಟಿಫಿಕೇಟ್ ನೀಡಿದರೆ ಗೃಹ ಸಚಿವರು ಪಕ್ಷಪಾತಿಗಳಾಗುತ್ತಾರೆ. ಜೊತೆಗೆ ಧರ್ಮಸ್ಥಳ ಪ್ರಕರಣವನ್ನು ಮುಚ್ಚಿ ಹಾಕುವ ಮನಸ್ಥಿತಿ ಸರ್ಕಾರಕ್ಕೆ ಇದೆ ಎಂಬ ಭಾವನೆ ಜನರಲ್ಲಿ ಬರುತ್ತದೆ ಎಂದು ಎಚ್ಚರಿಸಿದರು.
ಷಡ್ಯಂತ್ರ ಇದೀಗ ಬಯಲಾಗಿದೆ. ಧಾರ್ಮಿಕ ಕೇಂದ್ರದ ಬಗ್ಗೆ ಅಪನಂಬಿಕೆ ಹುಟ್ಟಿಸುವುದೇ ಈ ಷಡ್ಯಂತರದ ಸಂಚಿನ ಭಾಗವಾಗಿತ್ತು. ಅಲ್ಲದೆ ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಅಗೌರವ ತರುವ ದೊಡ್ಡ ಹುನ್ನಾರವು ನಡೆದಿದೆ ಎಂದು ಹೇಳಿ, ನಕ್ಸಲರನ್ನು ಬೆಂಬಲಿಸುವ, ಅರಾಜಕತೆಯನ್ನೇ ಉಸಿರಾಗಿಸಿಕೊಂಡಿರುವ ವ್ಯಕ್ತಿ ಷಡ್ಯಂತರದಲ್ಲಿ ಪಾಲುದಾರನಾಗಿದ್ದಾನೆ ಎನ್ನುವ ಮಾಹಿತಿ ಇದೆ. ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದರೆ ಕೂಡಲೇ ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಇನ್ನೊಂದು ಆಯಾಮದಲ್ಲಿ ತನಿಖೆ ನಡೆಸಬೇಕು. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಕುಟುಂಬದ ವಿರುದ್ಧ ಏಕೆ ಷಡ್ಯಂತರ ಮಾಡಿದರು. ಇದಕ್ಕೆ ಫಂಡಿಂಗ್ ಎಲ್ಲಿಂದ ಬಂತು ಎಂಬ ಬಗ್ಗೆಯೂ ತನಿಖೆಯಾಗಬೇಕು. ಈ ಷಡ್ಯಂತರದ ಹಿಂದೆ ಮತಾಂತರ ಮಾಫಿಯಾ ಇದೆಯೇ? ಶ್ರದ್ಧಾ ಕೇಂದ್ರಗಳನ್ನು ಟಾರ್ಗೆಟ್ ಮಾಡಿದ್ದರೆ? ಎಂಬ ಬಗ್ಗೆಯೂ ತನಿಖೆಯಾಗಬೇಕು. ಸರ್ಕಾರದ ನೇತೃತ್ವದ ಸಮಗ್ರ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದರು.




















