SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಮೆಟ್ರೋ ಅನುದಾನದ ಧ್ವನಿ ಅಡಗಿಸಲು ಯತ್ನ: ಸಚಿವ ಕೃಷ್ಣ ಬೈರೇಗೌಡ ಭಾಷಣಕ್ಕೆ ಕೊಕ್‌! – ‘ರಾಜ್ಯಕ್ಕೆ...

ಮೆಟ್ರೋ ಅನುದಾನದ ಧ್ವನಿ ಅಡಗಿಸಲು ಯತ್ನ: ಸಚಿವ ಕೃಷ್ಣ ಬೈರೇಗೌಡ ಭಾಷಣಕ್ಕೆ ಕೊಕ್‌! – ‘ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನವೇ’

0
39
ನನ್ನ ಮಾತು ಕಟ್ ಮಾಡಬಹುದು, ಕೆಲಸವನ್ನಲ್ಲ: ಭಾಷಣಕ್ಕೆ ಅವಕಾಶ ನಿರಾಕರಣೆ ಕುರಿತು ಕೃಷ್ಣ ಬೈರೇಗೌಡ ಕಿಡಿ

‘ನಮ್ಮ ಮೆಟ್ರೋ’ ಪಿಂಕ್ ಲೈನ್ ಉದ್ಘಾಟನೆ: ಸಚಿವ ಕೃಷ್ಣ ಬೈರೇಗೌಡ ಭಾಷಣ ಕೈಬಿಟ್ಟಿದ್ದಕ್ಕೆ ಆಕ್ರೋಶ.

ಬೆಂಗಳೂರು : ಕರ್ನಾಟಕಕ್ಕೆ ನಮ್ಮ ಮೆಟ್ರೋ ಯೋಜನೆಯಲ್ಲಿ ನ್ಯಾಯಯುತ ಅನುದಾನದ ಪಾಲು ಕೇಳಿದ್ದಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವನ ಭಾಷಣವನ್ನೇ ಬಿಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವೆಂಬರ್ 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನಾ ಕಾರ್ಯಕ್ರಮದ ಭಾಷಣ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಡಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಬೆಳವಣಿಗೆ ರಾಜ್ಯ–ಕೇಂದ್ರ ಸರ್ಕಾರಗಳ ನಡುವಿನ ಮೆಟ್ರೋ ಅನುದಾನ ವಿವಾದಕ್ಕೆ ಮತ್ತಷ್ಟು ರಾಜಕೀಯ ಆಯಾಮ ನೀಡಿದೆ.

ಸಭಾ ಕಾರ್ಯಕ್ರಮದ ಆರಂಭಿಕ ಕರಡು ಪಟ್ಟಿಯಲ್ಲಿ ತಮಗೆ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ನವೆಂಬರ್ 11ರ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಭಾಷಣಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಕೃಷ್ಣ ಬೈರೇಗೌಡ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮೆಟ್ರೋ ಯೋಜನೆಗೆ ಬಹುತೇಕ ಬಂಡವಾಳವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತಿರುವಾಗ, ರಾಜ್ಯದ ನ್ಯಾಯಯುತ ಪಾಲಿನ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಈ ರೀತಿ ಪ್ರತಿಕ್ರಿಯೆ ಸಿಕ್ಕಿದೆ ಎಂಬುದು ಅವರ ಆರೋಪ. “ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ” ಎಂಬ ಸಂದೇಶದ ಮೂಲಕ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮೆಟ್ರೋ ಅನುದಾನ ಹಂಚಿಕೆಯೇ ವಿವಾದದ ಕೇಂದ್ರ : ನಮ್ಮ ಮೆಟ್ರೋ ಯೋಜನೆಯ ಹಣಕಾಸು ಹಂಚಿಕೆ ಕುರಿತು ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆಯುತ್ತಿದೆ. ರಾಜ್ಯ ಸರ್ಕಾರದ ಲೆಕ್ಕಾಚಾರದ ಪ್ರಕಾರ, ಮೆಟ್ರೋ ಯೋಜನೆಯ ವಿವಿಧ ಹಂತಗಳು ಹಾಗೂ ಸಂಬಂಧಿತ ವೆಚ್ಚಗಳ ಒಟ್ಟು ಮೊತ್ತ ₹77,891 ಕೋಟಿ. ಇದರಲ್ಲಿ ಕರ್ನಾಟಕ ಸರ್ಕಾರ ₹65,291 ಕೋಟಿ ಅಂದರೆ ಶೇ.83.8ರಷ್ಟು ವೆಚ್ಚ ಭರಿಸಿದ್ದರೆ, ಕೇಂದ್ರ ಸರ್ಕಾರದ ಕೊಡುಗೆ ₹12,600 ಕೋಟಿ ಅಥವಾ ಶೇ.16.2ರಷ್ಟಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದ್ದಾರೆ. ಭೂಸ್ವಾಧೀನ, ಸಾಲ ಮರುಪಾವತಿ, ಬಡ್ಡಿ, ತೆರಿಗೆ ಮತ್ತು ಯೋಜನಾ ವಿಳಂಬದಿಂದ ಉಂಟಾದ ಹೆಚ್ಚುವರಿ ವೆಚ್ಚಗಳನ್ನೂ ರಾಜ್ಯದ ಲೆಕ್ಕಾಚಾರದಲ್ಲಿ ಪರಿಗಣಿಸಲಾಗಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರದ ಅಂಕಿಅಂಶಗಳನ್ನು ಪ್ರಶ್ನಿಸಿದ್ದು, ಕೇಂದ್ರದ ಕೊಡುಗೆಯನ್ನು ಲೆಕ್ಕಹಾಕುವ ವಿಧಾನದಲ್ಲೇ ವ್ಯತ್ಯಾಸವಿದೆ ಎಂದು ವಾದಿಸಿದ್ದಾರೆ. ಹೀಗಾಗಿ ಕೇಂದ್ರದ ನೇರ ಅನುದಾನ ಮತ್ತು ಇತರ ಹಣಕಾಸು ಬದ್ಧತೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕೆಂಬ ಚರ್ಚೆಯೂ ನಡೆದಿದೆ.

ನಾಳೆ ಪ್ರಧಾನಿ ಮೋದಿ ಅವರಿಂದ ಪಿಂಕ್ ಲೈನ್ ಉದ್ಘಾಟನೆ : ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮೆಟ್ರೋ ಪಿಂಕ್ ಲೈನ್‌ನ 7.5 ಕಿಲೋಮೀಟರ್ ಉದ್ದದ ಎತ್ತರಿಸಿದ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಜಯದೇವ ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗದೊಂದಿಗೆ ಸಂಪರ್ಕ ಹೊಂದಲಿದೆ. ನವೆಂಬರ್ 14ರ ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಸೇವೆ ಆರಂಭವಾಗಲಿದೆ. ಆರಂಭದಲ್ಲಿ ಐದು ರೈಲುಗಳನ್ನು ನಿಯೋಜಿಸಿ, ಎಂಟು ನಿಮಿಷಗಳ ಅಂತರದಲ್ಲಿ ಸಂಚಾರ ನಡೆಸಲು ಯೋಜಿಸಲಾಗಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನವೇ ಮೆಟ್ರೋ ಅನುದಾನ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮುಂದೆ ತನ್ನ ಬೇಡಿಕೆಗಳನ್ನು ಮಂಡಿಸಲು ಮುಂದಾಗಿದೆ. ಈ ನಡುವೆ ಕಾರ್ಯಕ್ರಮದ ಭಾಷಣ ಪಟ್ಟಿಯಿಂದ ಸಚಿವ ಕೃಷ್ಣ ಬೈರೇಗೌಡ ಅವರ ಹೆಸರು ಕೈಬಿಟ್ಟಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಆದರೆ ಅವರ ಭಾಷಣವನ್ನು ಕೈಬಿಡಲು ಕಾರಣವೇನು ಎಂಬುದರ ಕುರಿತು ಪ್ರಧಾನಿ ಕಚೇರಿ ಅಥವಾ ಕಾರ್ಯಕ್ರಮ ಆಯೋಜಕರ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.