ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೀಡಿರುವ ಇಂಧನ ಮಿತವ್ಯಯ ಮತ್ತು ಸಾರ್ವಜನಿಕ ಸಾರಿಗೆ ಬಳಕೆಯ ಕರೆಗೆ ಸ್ಪಂದನೆಯಾಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಹೊಸ ಬದಲಾವಣೆಗೆ ಮುಂದಾಗಿದ್ದು, ಅಧಿಕೃತ ಕಾರು ಬಿಟ್ಟು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇಂದು ಬೆಳಗ್ಗೆ ಕುಂಬಳಗೋಡಿನ ಗಾರ್ಡನ್ ಏಷ್ಯಾ ರೆಸಾರ್ಟ್‌ನಲ್ಲಿ ಆಯೋಜಿಸಲಾದ ಬಿಜೆಪಿಯ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಭಾಗವಹಿಸಲು ಅವರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲಿನ ಮೂಲಕವೇ ಕೆಂಗೇರಿವರೆಗೆ ಪ್ರಯಾಣಿಸಿದರು. ಬಳಿಕ ಅಲ್ಲಿಂದ ಕುಂಬಳಗೋಡಿಗೆ ತೆರಳಿದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಪೆಟ್ರೋಲ್ ಮತ್ತು ಡೀಸಲ್ ಬಳಕೆಯನ್ನು ಕಡಿಮೆ ಮಾಡುವಂತೆ ಕರೆ ನೀಡಿದ್ದರು. ಅನಾವಶ್ಯಕ ವಾಹನ ಬಳಕೆಯನ್ನು ತಗ್ಗಿಸಿ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸಬೇಕು ಎಂದು ಸಲಹೆ ನೀಡಿದ್ದರು. ಇದೇ ಹಿನ್ನೆಲೆ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನೂ ಪ್ರಧಾನಿ ಮೋದಿ ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಈ ಸಂದೇಶಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಬಿ.ವೈ. ವಿಜಯೇಂದ್ರ ಕೂಡ ತಮ್ಮ ದಿನನಿತ್ಯದ ರಾಜಕೀಯ ಪ್ರವಾಸಗಳಲ್ಲಿ ಮೆಟ್ರೋ ಬಳಕೆಗೆ ಆದ್ಯತೆ ನೀಡಲು ಮುಂದಾಗಿದ್ದಾರೆ. ಅವರು ಸಾಮಾನ್ಯ ಪ್ರಯಾಣಿಕರ ನಡುವೆ ನಿಂತು ಹಾಗೂ ಕುಳಿತು ಪ್ರಯಾಣಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, “ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಇಂಧನ ಮಿತವ್ಯಯಕ್ಕೆ ಕರೆ ನೀಡಿದ್ದಾರೆ. ಅವರು ಸ್ವತಃ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ನಾನು ಕೂಡ ಮೆಟ್ರೋ ಮೂಲಕ ಪ್ರಯಾಣಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆ ಬಳಕೆಯಿಂದ ಇಂಧನ ಉಳಿವಿನ ಜೊತೆಗೆ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವುದಕ್ಕೂ ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ತಮ್ಮ ನಡೆ ಮೂಲಕ ಜನರಿಗೆ ತಲುಪಿಸಲು ಯತ್ನಿಸುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ.
ಕುಂಬಳಗೋಡಿನಲ್ಲಿ ನಡೆಯುತ್ತಿರುವ ಬಿಜೆಪಿ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಭಾಗವಹಿಸಿದ ಬಳಿಕ ರವಿಶಂಕರ್ ಗುರುಜಿಗಳ ಆಶೀರ್ವಾದ ಪಡೆಯಲು ತೆರಳುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.
ಇದೇ ವೇಳೆ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಕುರಿತು ವಿಪಕ್ಷಗಳಿಂದ ಬರುತ್ತಿರುವ ಟೀಕೆಗಳಿಗೂ ಅವರು ತಿರುಗೇಟು ನೀಡಿದ್ದಾರೆ. “ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿಯೇ ರಾಜೀನಾಮೆ ಕೊಡಬೇಕು ಎಂದು ಕೆಲವರು ಆಗ್ರಹಿಸುತ್ತಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಎರಡು ವರ್ಷಗಳ ಹಿಂದೆಯೇ ರಾಜೀನಾಮೆ ನೀಡಬೇಕಾಗಿತ್ತು” ಎಂದು ಅವರು ವ್ಯಂಗ್ಯವಾಡಿದರು.
“ಜಗತ್ತಿನ ಆರ್ಥಿಕ ಪರಿಸ್ಥಿತಿ, ಅಂತರರಾಷ್ಟ್ರೀಯ ಮಾರುಕಟ್ಟೆ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ಇಂಧನ ಬೆಲೆಗಳು ಏರಿಳಿತ ಕಾಣುತ್ತವೆ. ಇದು ಕೇವಲ ಭಾರತದ ವಿಷಯವಲ್ಲ, ಜಾಗತಿಕ ಪರಿಣಾಮಗಳಿಗೂ ಸಂಬಂಧಿಸಿದ ವಿಚಾರ” ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು.






















