Home Advertisement
Home ನಮ್ಮ ಜಿಲ್ಲೆ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿ

0
44
ಸಾಂದರ್ಭಿಕ ಚಿತ್ರ

ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮಹತ್ವದ ಮಾಹಿತಿ ನೀಡಿದ್ದು, ಮೇ 17ರ ಭಾನುವಾರ ಬೆಳಿಗ್ಗೆ ಎರಡು ಗಂಟೆಗಳ ಕಾಲ ಭಾಗಶಃ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಿಸಿದೆ.

ಅತ್ಯಗತ್ಯ ತಾಂತ್ರಿಕ ನಿರ್ವಹಣಾ ಮತ್ತು ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳ ನಡುವೆ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣ ಹಾಗೂ ಸೆಂಟ್ರಲ್ ಕಾಲೇಜಿನ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣಗಳ ನಡುವಿನ ಭಾಗದಲ್ಲಿ ತುರ್ತು ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಪರಿಣಾಮವಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಭಾನುವಾರ ಬೆಳಿಗ್ಗೆ ರೈಲು ಸಂಚಾರ ಲಭ್ಯವಿರುವುದಿಲ್ಲ.

ಆದರೆ, ಬೆಳಿಗ್ಗೆ 9:00 ಗಂಟೆಯ ನಂತರ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಇದೇ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ ನೇರಳೆ ಮಾರ್ಗದ ಇತರೆ ಭಾಗಗಳಲ್ಲಿ ಸೇವೆಗಳು ಮುಂದುವರಿಯಲಿವೆ. ಚಲ್ಲಘಟ್ಟದಿಂದ ವಿಜಯನಗರದವರೆಗೆ ಮತ್ತು ಎಂ.ಜಿ. ರಸ್ತೆ ನಿಲ್ದಾಣದಿಂದ ವೈಟ್‌ಫೀಲ್ಡ್‌ (ಕಾಡುಗೋಡಿ)ವರೆಗೆ ಮೆಟ್ರೋ ರೈಲುಗಳು ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿವೆ.

ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವಿನ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗೆಯೇ ಹಳದಿ ಮಾರ್ಗದ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ನಡುವಿನ ಮೆಟ್ರೋ ಸೇವೆಗಳೂ ಸಹ ಎಂದಿನಂತೆ ಲಭ್ಯವಿರಲಿವೆ.

ಭಾನುವಾರ ಬೆಳಿಗ್ಗೆ ಮೆಜೆಸ್ಟಿಕ್, ಕಬ್ಬನ್ ಪಾರ್ಕ್ ಅಥವಾ ನೇರಳೆ ಮಾರ್ಗದ ಕೇಂದ್ರ ಭಾಗಗಳಿಗೆ ಪ್ರಯಾಣಿಸಲು ಯೋಜಿಸಿರುವ ಸಾರ್ವಜನಿಕರು ಈ ತಾತ್ಕಾಲಿಕ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಪೂರ್ವ ಯೋಜನೆ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.