SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ ಅವಿಭಾಜ್ಯ ಅಂಗ ಠರಾವ್: ಪಾಲಿಕೆ ಆಯುಕ್ತರಿಗೆ ಪ್ರಾದೇಶಿಕ ಆಯುಕ್ತರ ಪತ್ರ

ಬೆಳಗಾವಿ ಅವಿಭಾಜ್ಯ ಅಂಗ ಠರಾವ್: ಪಾಲಿಕೆ ಆಯುಕ್ತರಿಗೆ ಪ್ರಾದೇಶಿಕ ಆಯುಕ್ತರ ಪತ್ರ

0
58

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಗೊತ್ತುವಳಿಯನ್ನು ಅಂಗೀಕರಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಕಳೆದ ದಿ. 8 ರಂದು ಈ ಪತ್ರವು ಪಾಲಿಕೆ ಆಯುಕ್ತರಿಗೆ ರವಾನೆಯಾಗಿದೆ. ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಬೆಳಗಾವಿ ಮಹಾನಗರ ಪಾಲಿಕೆಗೆ ನಿರ್ದೇಶನ ನೀಡುವಂತೆ ಕೋರಿ ಗಡಿನಾಡು ಕನ್ನಡಿಗರ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯು ಸಲ್ಲಿಸಿದ ಮನವಿಗಳನ್ನು ಉಲ್ಲೇಖಿಸಿ ಈ ಪತ್ರ ರವಾನಿಸಲಾಗಿದೆ.

ಗಡಿನಾಡು ಕನ್ನಡಿಗರ ಸೇನೆಯ ರಾಜಾಧ್ಯಕ್ಷ ಬಲರಾಮ ಮಾಸೇನಟ್ಟಿ ಅವರು ಜೂನ್ 2ರಂದು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವಾಜೀದ ಅಲಿ ಹಿರೇಕೊಡಿ ಅವರು ಜೂನ್ 3 ರಂದು ಸಲ್ಲಿಸಿದ ಮನವಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಪತ್ರದಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸುವ ಅಗತ್ಯವಿದೆ ಎಂದು ಮನವಿದಾರರು ಒತ್ತಾಯಿಸಿರುವುದನ್ನು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಮನವಿಗಳಲ್ಲಿನ ಅಂಶಗಳನ್ನು ಪರಿಶೀಲಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ತಿಳಿಸಲಾಗಿದೆ.

ಅಲ್ಲದೆ, ಕೈಗೊಂಡ ಕ್ರಮದ ಬಗ್ಗೆ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿ ಸಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ. ಗಡಿನಾಡು, ಕನ್ನಡಿಗರ ಭಾವನೆ ಹಾಗೂ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಪಾಲಿಕೆ ಮುಂದಿನ ಕ್ರಮದತ್ತ ಎಲ್ಲರ ಗಮನ ನೆಟ್ಟಿದೆ.