Home Advertisement
Home ನಮ್ಮ ಜಿಲ್ಲೆ ಧಾರವಾಡ ನಾಯಕನನ್ನು ಆಯ್ಕೆ ಮಾಡಲಾಗದವರು ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ

ನಾಯಕನನ್ನು ಆಯ್ಕೆ ಮಾಡಲಾಗದವರು ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ

0
124
ಲಕ್ಷ್ಮಣ ಸವದಿ

ಹುಬ್ಬಳ್ಳಿ: ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ ಬಿಜೆಪಿ ನಾಯಕರು ನಮ್ಮ ಪಕ್ಷದ ಕಾರ್ಯ ವೈಖರಿ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಮೊದಲು ನೆರೆ ಹಾವಳಿ, ಅತಿವೃಷ್ಟಿಯಿಂದ ಹಾಳಾಗಿದ್ದಾಗ ಏನು ಪರಿಹಾರ ಕೊಟ್ಟರು ಎನ್ನುವುದನ್ನು ಹೇಳಲಿ. ತದ ನಂತರ ನಮ್ಮ ಸರ್ಕಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಲಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಆಗಲೇ ಸರಿಯಾಗಿ ಪರಿಹಾರ ನೀಡಿಲ್ಲ. ಇನ್ನೂ ಎಷ್ಟೋ ಸಂತ್ರಸ್ತರಿಗೆ ಪರಿಹಾರ ನೀಡುವುದು ಬಾಕಿಯಿದೆ. ನಮ್ಮ ಸರ್ಕಾರ ಎಲ್ಲರಿಗೂ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಿದೆ. ಬೆರಳು ತೋರಿಸಿ ಆರೋಪ ಮಾಡುವಾಗ ನಾಲ್ಕು ಬೆರಳು ಅವರನ್ನೇ ತೋರಿಸುತ್ತದೆ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಇಡೀ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪದ ಕುರಿತು ಪ್ರತಿಕ್ರಿಸಿದ ಸವದಿ, ಸರ್ಕಾರ ಎಲ್ಲ ಬಗೆಯ ಸಹಾಯ ಮಾಡುತ್ತಿದ್ದು, ಯಾವುದೇ ಅಧಿಕಾರವಿಲ್ಲದೇ ಅಸಹಾಯಕತೆಯಿಂದ ಬಸವರಾಜ ಬೊಮ್ಮಾಯಿ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಕೆಲಸ ಮಾಡುತ್ತಿದ್ದು ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಶಕ್ತಿ ಯೋಜನೆಯಿಂದ ಯಾವುದೇ ರೀತಿಯ ಆರ್ಥಿಕ ತೊಂದರೆ ಆಗಿಲ್ಲ. ಅದರಿಂದ ಸಾಕಷ್ಟು ಸಹಾಯವಾಗಿದೆ. ಜನರು ದಿನನಿತ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರತಿದಿನ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಸಂಸ್ಥೆಗೆ ಹೆಚ್ಚಿನ ಲಾಭವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕರೊಬ್ಬರು ನೀಡಿದ್ದ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿದು ಹಾಕಿದ್ದಾರೆ ಎನ್ನುವುದು ಊಹಾಪೋಹ. ಅದಕ್ಕೆ ಸಾಕ್ಷಿ ಏನಾದರೂ ಇದೆಯೇ ಎಂದು ಪ್ರಶ್ನಿಸಿದರು. ಶಾಸಕರ ಅಸಮಾಧಾನದ ಸಿಟ್ಟು ತಣಿಸಲು ದೆಹಲಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ಕರೆದ ಹಿನ್ನೆಲೆ ಕುರಿತು ಉತ್ತರಿಸಿ, ಶಾಸಕರ ಅಸಮಾಧಾನ ಕುರಿತು ಚರ್ಚೆ ನಡೆಸಲು ಸಭೆ ಕರೆದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚಿಸಲು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಭೆ ಕರೆದಿದ್ದಾರೆ. ಅಸಮಾಧಾನಗೊಂಡ ಶಾಸಕರ ಜೊತೆ ಈಗಾಗಲೇ ಶಾಸಕಾಂಗ ಸಭೆ ಕರೆದು ಚರ್ಚಿಸಲಾಗಿದೆ ಎಂದರು.