Home Advertisement
Home ಕೃಷಿ/ವಾಣಿಜ್ಯ ಸೀಸನ್‌ ಬಂದರು ಮಾರುಕಟ್ಟೆಗೆ ಬಾರದ ಮಾವು: ಜೋನಿರೋಗ ರೈತರ ಕನಸು ನುಚ್ಚುನೂರು; ಗ್ರಾಹಕರಿಗೂ ಬರೆ

ಸೀಸನ್‌ ಬಂದರು ಮಾರುಕಟ್ಟೆಗೆ ಬಾರದ ಮಾವು: ಜೋನಿರೋಗ ರೈತರ ಕನಸು ನುಚ್ಚುನೂರು; ಗ್ರಾಹಕರಿಗೂ ಬರೆ

0
84

ಹಣ್ಣುಗಳ ರಾಜ ಮಾವಿನ ಘಮಲು ಮೂಗಿಗೆ ಬಡಿಯಬೇಕಿದ್ದ ಈ ಸಂದರ್ಭದಲ್ಲಿ ಬಿಸಿಲಿನ ತಾಪ ಸೇರಿದಂತೆ ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ದರ ಕೂಡಾ ಜನಸಾಮಾನ್ಯರು ಖರೀದಿಗೆ ಹಿಂದೆ ಮುಂದೆ ನೋಡುವಂತಾಗಿದೆ.ಮಾವಿನ ಹಣ್ಣನ್ನು ಹೆಚ್ಚಾಗಿ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಇಳುವರಿ ಕುಸಿದಿದೆ. ಅತಿಯಾದ ಬಿಸಿಯಿಂದಾಗಿ ಹೂವು ಕಟ್ಟುವಾಗಲೇ ರೋಗದ ಬಾಧೆ ಕಾಡಿತ್ತು.

ಇದರಿಂದ ಸುಮಾರು 45 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮಾವಿನ ಫಸಲಿಗೆ ರೋಗದ ಹೊಡೆತ ಬಿದ್ದಿರುವುದರಿಂದ ನಿರೀಕ್ಷೆಯಂತೆ ಹೆಚ್ಚು ಮಾರುಕಟ್ಟೆಗೆ ಬರುವುದು ಅನುಮಾನ.ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಹೂವು ಬಿಟ್ಟಿತ್ತು. ಕಳೆದ ಎರಡು ವರ್ಷದಲ್ಲಿ ನಷ್ಟ ಅನುಭವಿಸಿದ್ದನ್ನು ಈ ಬಾರಿ ಲಾಭ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದವರಿಗೆ ಅಕಾಲಿಕ ಮಳೆ ರೈತರ ಕನಸನ್ನು ನುಚ್ಚುನೂರು ಮಾಡಿದೆ.

ಜೋನಿ ರೋಗ : ಸೆಕೆ ಶುರುವಾಗುತ್ತಿದ್ದಂತೆ ವಿಪರೀತ ಬಿಸಿಲು ಹಾಗೂ ಮಾರ್ಚ್ ತಿಂಗಳಲ್ಲಿ ಎರಡು ಬಾರಿ ದಿಢೀರನೆ ಸುರಿದ ಅಕಾಲಿಕ ಮಳೆಯಿಂದಾಗಿ, ಮೊದಲ ಹಂತದಲ್ಲಿ ಚೆನ್ನಾಗಿದ್ದ ಮಾವಿನ ಕಾಯಿಗಳಿಗೆ ಈಗ ಜೋನಿ ರೋಗ ಹಾಗೂ ಕೀಟಬಾಧೆ ವಕ್ಕರಿಸಿದೆ. ಈ ಭಯಾನಕ ರೋಗದಿಂದಾಗಿಮಾವಿನಕಾಯಿಗಳು ಉದುರಲಾರಂಭಿಸಿವೆ. ಇನ್ನು ಮರದ ಕೊಂಬೆಗಳು ಕಪ್ಪಾಗಿದ್ದು, ಇದರ ಪರಿಣಾಮಮಾವಿನ ಹಣ್ಣಿನ ಮೇಲಾಗುತ್ತಿದೆ.

ರೈತರಲ್ಲಿ ಹೆಚ್ಚಿದ ಆತಂಕ: ಕಾಯಿಗಳ ಮೇಲೆ ಅಂಟಿನ ದ್ರವ (ಜೋನಿ ರೋಗ)ಮರದಲ್ಲೇ ಕೊಳೆತು, ಕಾಯಿಯಿಂದ ಕಾಯಿಗೆ, ಮರದಿಂದ ಮರಕ್ಕೆ ಈ ರೋಗ ಕಾಡ್ಡಿಚ್ಚಿನಂತೆ ಹರಡುತ್ತಿದೆ ಎನ್ನುತ್ತಾರೆ ಕೋಲಾರ ತಾಲೂಕಿನ ತೊಟ್ಲಿ ಗ್ರಾಮದ ಮಾವು ಬೆಳೆಗಾರರಾದ ನಾರಾಯಣಸ್ವಾಮಿ. ಪ್ರಸಕ್ತ ವರ್ಷ ಮರಗಳಲ್ಲಿನ ಹೂವು ನೋಡಿ ಭಾರಿ ಫಸಲಿನ ಲೆಕ್ಕಾಚಾರದಲ್ಲಿದ್ದೆವು. ಆದ್ರೆ, ಈಗ ಕೇವಲ ಶೇಕಡಾ 25ರಷ್ಟು ಇಳುವರಿ ಸಿಕ್ಕರೆ ಹೆಚ್ಚು ಎಂಬಂತಹ ದುಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ.

ಮುಖ್ಯವಾಗಿ ತೋತಾಪುರಿ ರಸಪುರಿ, ತಳಿಗಳು ಚೆನ್ನಾಗಿದ್ದರೂ ಅವುಗಳನ್ನು ಬೆಳೆದಿರುವ ಪ್ರದೇಶ ಬಹಳ ಕಡಿಮೆಯಿದೆ. ನೀರಾವರಿ ಸೌಲಭ್ಯದ ಜೊತೆಗೆ ಸಮಗ್ರ ಕೀಟ ನಿರ್ವಹಣೆ ಇರುವ ತೋಟಗಳಲ್ಲಿ ಮಾತ್ರ ಕೊಂಚ ಇಳುವರಿ ಇದ್ದು,ಮಳೆಯಾಧಾರಿತ ತೋಟಗಳಲ್ಲಿ ರೋಗದ ಪ್ರಮಾಣ ಮಿತಿಮೀರಿದೆ.

ವಿದೇಶಕ್ಕೂ ಕಷ್ಟ: ಕರ್ನಾಟಕದಲ್ಲಿನ ಮಾವಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚು. ಬಾದಾಮಿ, ಆಲ್ಲೋನ್ತೋ, ತೋತಾಪುರಿ, ನೀಲಂ, ರಸಪುರಿ ಸೇರಿದಂತೆ ಇನ್ನಿತರ ಮಾವಿಗೆ ವಿದೇಶದಲ್ಲಿ ಬೇಡಿಕೆ ಇದೆ. ಆದ್ರೆ, ಈ ಬಾರಿ ಕೋಲಾರದಲ್ಲೇ ಮಾವಿನ ಇಳುವರಿ ತೀರಾ ಕುಸಿದಿರುವುದರಿಂದ ಅಲ್ಲಿಂದ ವಿದೇಶಕ್ಕೆ ಗುಣಮಟ್ಟದ ಮಾವಿನ ರಫ್ತು ಎಷ್ಟರ ಮಟ್ಟಿಗೆ ಆಗಲಿದೆ ಎಂಬ ಅನುಮಾನ ಕಾಡುತ್ತಿದೆ. ಆದ್ರೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆನಿಗಮ (ಕೆಎಸ್‌ಎಂಡಿಎಂಸಿ) ನೇರ ಮಾರುಕಟ್ಟೆಗಾಗಿ ಮಾವಿನ ಮೇಳಗಳನ್ನು ಆಯೋಜಿಸುವುದರ ಜೊತೆಗೆ ವಿದೇಶಕ್ಕೆ ಗುಣಮಟ್ಟದ ಮಾವನ್ನು ರಫ್ತು ಮಾಡಲಾಗುವುದು ಎಂದು ತಿಳಿಸಿದೆ.

ಬೆಲೆ ಹೆಚ್ಚಳ: ಸಾಮಾನ್ಯವಾಗಿ ಮಾವಿನ ಹಂಗಾಮಿನಲ್ಲಿ ಮಾರುಕಟ್ಟೆಗಳಲ್ಲಿ ಕನಿಷ್ಠ 30ರಿಂದ 150 ರೂ.ವರೆಗೆ ಮಾವು ಮಾರಾಟವಾಗುತ್ತದೆ. ಆದ್ರೆ, ಈ ಬಾರಿ ಸಗಟು ಮಾರುಕಟ್ಟೆಯಲ್ಲೇ ಗುಣಮಟ್ಟದ ಮಾವು 50 ರೂ. ಇದ್ರೆ, ಗರಿಷ್ಠ 300 ರೂ.ವರೆಗೂ ಮಾರಾಟವಾಗುತ್ತಿದೆ. ಲಾಲ್‌ಬಾಗ್‌ನ ಮಾವು ಮೇಳದಲ್ಲಿ 15 ವಿಧದ ವಿವಿಧ ಮಾವಿನ ತಳಿಗಳು ಮಾರಾಟಕ್ಕೆ ಬಂದಿವೆ.

ಜೂನ್ ಮೊದಲ ವಾರದವರೆಗೆ ಈ ಮೇಳ ನಡೆಯಲಿದ್ದು, 500 ಟನ್ ಮಾವು ಮಾರಾಟದ ಗುರಿ ಇರಿಸಿಕೊಳ್ಳಲಾಗಿದೆ. ಆದರೆ, ಕಳೆದ ಬಾರಿ 20ಕ್ಕೂ ವಿವಿಧ ಮಾವಿನ ತಳಿಗಳು ಮಾರಾಟಕ್ಕೆ ಬಂದಿದ್ದವು. ಈ ಬಾರಿ ಅತಿ ಕಡಿಮೆ ಎಂದರೆ ಪ್ರತಿ ಕೆಜಿ ಮಾವಿಗೆ 35 ರೂ. ಇದ್ದರೆ ಗರಿಷ್ಠ 250ರೂ. ಇದೆ.

ಇಳುವರಿ ಕಡಿಮೆ: ವೈಪರೀತ್ಯದಿಂದಾಗಿ ಮಾವಿನ ಹವಾಮಾನ ಇಳುವರಿ ಸ್ವಲ್ಪ ಕಡಿಮೆಯಾಗಿದೆ. ಆದರೂ ಕೋಲಾರ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಗುಣಮಟ್ಟದ ಮಾವು ಬೆಳೆಯಲಾಗಿದೆ. ವಿದೇಶಕ್ಕೂ ರಫ್ತು ಮಾಡುತ್ತೇವೆ. ಲಾಲ್‌ಬಾಗ್‌ನಲ್ಲಿ ಏರ್ಪಡಿಸಿರುವ ಮಾವು ಮೇಳದಲ್ಲಿ 13ರಿಂದ 14 ವಿಧದ ತಳಿಗಳ ಮಾರಾಟವಾಗುತ್ತಿದೆ. ಇದಕ್ಕೆ ಗ್ರಾಹಕರ ಸಕಾರತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

*ಸಿಜೆ. ನಾಗರಾಜು, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ