SK Home Ad
Home ಸುದ್ದಿ ರಾಜ್ಯ ತಮಿಳುನಾಡಿನಲ್ಲಿ ಮಹಾ ಭೂಕಂಪ; ಕಮಲ ತೊರೆದ ‘ಸಿಂಗಂ’! ದ್ರಾವಿಡ ಕೋಟೆಯಲ್ಲಿ ಇನ್ನುಮುಂದೆ ‘ಕಾಮನ್ ಮ್ಯಾನ್’ ಪಾಲಿಟಿಕ್ಸ್!

ತಮಿಳುನಾಡಿನಲ್ಲಿ ಮಹಾ ಭೂಕಂಪ; ಕಮಲ ತೊರೆದ ‘ಸಿಂಗಂ’! ದ್ರಾವಿಡ ಕೋಟೆಯಲ್ಲಿ ಇನ್ನುಮುಂದೆ ‘ಕಾಮನ್ ಮ್ಯಾನ್’ ಪಾಲಿಟಿಕ್ಸ್!

0
75

ತಮಿಳುನಾಡು ರಾಜಕೀಯದಲ್ಲಿ ಇದೀಗ ಮಹಾ ಭೂಕಂಪ ಸಂಭವಿಸಿದೆ. ದ್ರಾವಿಡ ಕೋಟೆಯಲ್ಲಿ ಕಮಲ ಅರಳಿಸಲೇಬೇಕು ಎಂದು ಅಬ್ಬರಿಸಿದ್ದ ‘ಕರ್ನಾಟಕದ ಸಿಂಗಂ’, ತಮಿಳುನಾಡು ಬಿಜೆಪಿಯ ಮಾಜಿ ಸಾರಥಿ ಕೆ. ಅಣ್ಣಾಮಲೈ ಕೊನೆಗೂ ಕೇಸರಿ ಪಕ್ಷಕ್ಕೆ ‘ಗುಡ್ ಬೈ’ ಹೇಳಿ ತಮ್ಮ ಹೊಸ ಹಾದಿ ಘೋಷಿಸಿದ್ದಾರೆ. ಜೂನ್ 5ರ ಶುಕ್ರವಾರದಂದು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ, ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಅಣ್ಣಾಮಲೈ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ತಾವು ಬಿಜೆಪಿಗೆ ರಾಜೀನಾಮೆ ನೀಡಿರುವುದನ್ನು ಸ್ಪಷ್ಟಪಡಿಸಿರುವ ಅವರು, ತಮಿಳುನಾಡಿನಲ್ಲಿ ಯುವಕರು ಮತ್ತು ಎಲ್ಲರನ್ನೂ ಒಳಗೊಂಡ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಘೋಷಿಸಿದ್ದಾರೆ.

ಕಳೆದ 18 ತಿಂಗಳುಗಳಿಂದ ತಮಿಳುನಾಡಿನಲ್ಲಿ ಬಿಜೆಪಿಯನ್ನು ಮುನ್ನಡೆಸುತ್ತಾ, ಪಕ್ಷಕ್ಕಾಗಿ ತಳಮಟ್ಟದಿಂದ ಕೆಲಸ ಮಾಡಿದ್ದ ಅಣ್ಣಾಮಲೈ ಅವರಿಗೆ ತಮಿಳು ಜನರಿಂದ ಅಪಾರ ಜನಮನ್ನಣೆ ಸಿಕ್ಕಿದ್ದರೂ, ಅದನ್ನು ಚುನಾವಣಾ ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭೆ ಚುನಾವಣೆಯ ನಂತರ ಬಿಜೆಪಿಗೆ ರಾಜೀನಾಮೆ ನೀಡಬಹುದು ಎಂದು ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಅದರಂತೆಯೇ ಜೂನ್ 2ರಂದು ದೆಹಲಿಗೆ ತೆರಳಿದ್ದ ಅಣ್ಣಾಮಲೈ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಹಾಗೂ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಸುದೀರ್ಘವಾದ 5 ಪುಟಗಳ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದರು. ಇವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಆರ್‌ಎಸ್‌ಎಸ್ ನಾಯಕರು ನಡೆಸಿದ ಸಂಧಾನ ಪ್ರಯತ್ನಗಳೂ ಕೂಡ ಫಲ ನೀಡಲಿಲ್ಲ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಅವರ ಇಷ್ಟದಂತೆಯೇ ನಡೆಯಲು ಹಸಿರು ನಿಶಾನೆ ತೋರಿದೆ. ಈ ಮಧ್ಯೆ ಅಣ್ಣಾಮಲೈ ಅವರನ್ನು ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಚಿಂತನೆ ನಡೆಸಿತ್ತಾದರೂ, ಅವರು ಪಕ್ಷ ತೊರೆಯುವ ಸುಳಿವು ಸಿಕ್ಕಿದ್ದರಿಂದ ಆ ಯೋಜನೆಯೂ ಕೈತಪ್ಪಿಹೋಯಿತು.

ಅಣ್ಣಾಮಲೈ ಅವರ ಈ ದಿಢೀರ್ ನಿರ್ಧಾರದ ಹಿಂದೆ ತಮಿಳುನಾಡಿನ ಇತ್ತೀಚಿನ ರಾಜಕೀಯ ಸಮೀಕರಣಗಳು ದೊಡ್ಡ ಪಾತ್ರ ವಹಿಸಿವೆ. ತಮಿಳುನಾಡಿನಲ್ಲಿ ನಟ ವಿಜಯ್ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಸ್ಥಾಪಿಸಿ, ಕೇವಲ ಎರಡೇ ವರ್ಷಗಳಲ್ಲಿ ಅಪಾರ ಜನಬೆಂಬಲದೊಂದಿಗೆ ದೊಡ್ಡ ಯಶಸ್ಸು ಸಾಧಿಸಿದ್ದು ಅಣ್ಣಾಮಲೈ ಅವರ ಲೆಕ್ಕಾಚಾರವನ್ನು ಬದಲಾಯಿಸಿದೆ. ತಮಿಳುನಾಡಿನ ಜನತೆ ಹೊಸ ಪ್ರಾದೇಶಿಕ ಪಕ್ಷಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ, ಆದರೆ ರಾಷ್ಟ್ರೀಯ ಪಕ್ಷಗಳಿಗೆ ಇಲ್ಲಿ ಸ್ವತಂತ್ರ ಅಸ್ತಿತ್ವ ಕಂಡುಕೊಳ್ಳುವುದು ಕಷ್ಟ ಎನ್ನುವ ಸತ್ಯವನ್ನು ಅಣ್ಣಾಮಲೈ ಅರಿತುಕೊಂಡಿದ್ದಾರೆ. ರಾಷ್ಟ್ರೀಯ ಪಕ್ಷಗಳು ಇಲ್ಲಿ ಕೇವಲ ದ್ರಾವಿಡ ಪಕ್ಷಗಳ ನೆರಳಿನಲ್ಲಿ ಮಾತ್ರ ರಾಜಕಾರಣ ಮಾಡಬಲ್ಲವು ಎಂಬುದು ಸಾಬೀತಾಗಿರುವುದರಿಂದಲೇ, ಅವರು ಬಿಜೆಪಿಯಿಂದ ಹೊರಬಂದು ತಮಿಳು ತತ್ವಶಾಸ್ತ್ರ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ.

ತಮ್ಮ ಹೊಸ ರಾಜಕೀಯ ಪಯಣದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅಣ್ಣಾಮಲೈ, ತಾವು ತಮಿಳುನಾಡಿನಲ್ಲಿ ‘ಕಾಮನ್ ಮ್ಯಾನ್ ಪಾಲಿಟಿಕ್ಸ್’ ಅಂದರೆ ಸಾಮಾನ್ಯ ಜನರಿಗಾಗಿ ಇರುವ ರಾಜಕಾರಣವನ್ನು ಶುರು ಮಾಡುವುದಾಗಿ ಹೇಳಿದ್ದಾರೆ. ತಮಿಳುನಾಡಿಗೆ ಸದ್ಯ ಶುದ್ಧ ಹಾಗೂ ದಕ್ಷ ನಾಯಕರ ಅಗತ್ಯವಿದೆ. ಕೇವಲ ಒಬ್ಬ ಮುಖ್ಯಮಂತ್ರಿಯಿಂದ ಅಥವಾ ಒಂದು ನಿರ್ದಿಷ್ಟ ಕುಟುಂಬದಿಂದ ತಮಿಳುನಾಡಿನ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ದ್ರಾವಿಡ ಪಕ್ಷಗಳ ಕುಟುಂಬ ರಾಜಕಾರಣಕ್ಕೆ ಟಾಂಗ್ ನೀಡಿದ್ದಾರೆ. ತಮಿಳುನಾಡಿನಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ‘ನಿರಂತರ ನಾಯಕರು’ ಎನ್ನುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡುವ ಕಾಲ ಬಂದಿದೆ ಎಂದು ಗುಡುಗಿರುವ ಮಾಜಿ ಐಪಿಎಸ್ ಅಧಿಕಾರಿ, ರಾಜ್ಯದ ಏಳಿಗೆಗಾಗಿ ಹೊಸ ಪಕ್ಷ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ. ಬಿಜೆಪಿಯಲ್ಲಿ ಸಿಗದ ಯಶಸ್ಸುನ್ನು ಸ್ವಂತ ಪಕ್ಷ ಕಟ್ಟಿ ಪಡೆಯಲು ಸಜ್ಜಾಗಿರುವ ಅಣ್ಣಾಮಲೈ ಅವರ ಈ ನಡೆ, ಮುಂಬರುವ ದಿನಗಳಲ್ಲಿ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸುವುದಂತೂ ಗ್ಯಾರಂಟಿ.