ಬೆಂಗಳೂರು: ನನ್ನ ಹೆಗಲ ಮೇಲಿರುವುದು ಕೇವಲ ಮುಖ್ಯಮಂತ್ರಿಯ ಜವಾಬ್ದಾರಿಯಲ್ಲ, ಬದಲಿಗೆ ಕೋಟ್ಯಂತರ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ ಎಂದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಾವೆಲ್ಲರೂ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ, ರಾಜ್ಯದ ಸರ್ವತೋಮುಖ ಪ್ರಗತಿಗೆ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ನಮಗೆ ಮುಖ್ಯ ಎಂದು ಹೇಳಿದ್ದಾರೆ.
ಪೋಸ್ಟ್‌ನಲ್ಲಿ “ಜನರಿಂದ, ಜನರಿಗಾಗಿ, ಜನರಿಗೋಸ್ಕರ” ಎಂದು ಆರಂಭ ಮಾಡಿರುವ ಅವರು, “ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿ, ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ನನ್ನ ಪ್ರೀತಿಯ ಕರ್ನಾಟಕದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದದಿಂದ ಲೋಕಭವನದಲ್ಲಿ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಈ ಕ್ಷಣದಲ್ಲಿ ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ತಲೆಬಾಗುತ್ತೇನೆ” ಎಂದು ಹೇಳಿದ್ದಾರೆ.
“ಇಂದು ನನ್ನ ಹೆಗಲ ಮೇಲಿರುವುದು ಕೇವಲ ಮುಖ್ಯಮಂತ್ರಿಯ ಜವಾಬ್ದಾರಿಯಲ್ಲ, ಬದಲಿಗೆ ಕೋಟ್ಯಂತರ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ. ಈ ಅವಕಾಶವನ್ನು ನನಗೆ ಕರುಣಿಸಿದ ಹಿರಿಯರಿಗೆ, ಮಾರ್ಗದರ್ಶಕರಿಗೆ ಹಾಗೂ ನನ್ನ ಶಕ್ತಿಯಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು” ಎಂದು ತಿಳಿಸಿದ್ದಾರೆ.
“ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನದ ಯುಗದಲ್ಲಿ, ಹೊಸ ಆಲೋಚನೆಗಳೊಂದಿಗೆ ನಮ್ಮ ಹೆಮ್ಮೆಯ ಕರ್ನಾಟಕವನ್ನು ಅಭಿವೃದ್ಧಿಯ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಬೇಕಿದೆ. ಈ ಸರ್ವತೋಮುಖ ಪ್ರಗತಿಯ ದಾರಿಯಲ್ಲಿ ರೈತರು, ಶ್ರಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ನಮಗೆ ಮುಖ್ಯ” ಎಂದು ಅವರು ಹೇಳಿದ್ದಾರೆ.
“ಯಾವುದೇ ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ, ಆದರೆ ನಾವೆಲ್ಲರೂ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬನ್ನಿ, ನಮ್ಮ ಭವಿಷ್ಯದ ಪೀಳಿಗೆ ಹೆಮ್ಮೆ ಪಡುವಂತಹ ಸುಂದರ, ಸಮೃದ್ಧ ಮತ್ತು ಪ್ರಗತಿಪರ ಕರ್ನಾಟಕವನ್ನು ಕಟ್ಟೋಣ.” ಎಂದು ಡಿ.ಕೆ. ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ.




















