SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪೊಲೀಸರ ಜಾಣ್ಮೆ, ಸಾರ್ವಜನಿಕರ ಪ್ರಾಮಾಣಿಕತೆ: ಚಿನ್ನದ ಪರ್ಸ್ ಮಾಲೀಕರ ಮಡಿಲಿಗೆ

ಪೊಲೀಸರ ಜಾಣ್ಮೆ, ಸಾರ್ವಜನಿಕರ ಪ್ರಾಮಾಣಿಕತೆ: ಚಿನ್ನದ ಪರ್ಸ್ ಮಾಲೀಕರ ಮಡಿಲಿಗೆ

0
184

ದಾವಣಗೆರೆ: ಕಳೆದು ಹೋಗಿದ್ದ ಚಿನ್ನಾಭರಣಗಳಿರುವ ಪರ್ಸ್‌ನ್ನು ಪತ್ತೆ ಹಚ್ಚಿ ಅದರ ನಿಜವಾದ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಬಸವನಗರ ಪೊಲೀಸರು ಪ್ರಾಮಾಣಿಕತೆ ಹಾಗೂ ಕಾರ್ಯಕ್ಷಮತೆಯನ್ನು ಮೆರೆದಿದ್ದಾರೆ.

ದಾವಣಗೆರೆ ನಿವಾಸಿಯೊಬ್ಬರು ಜಾಲಿನಗರದಿಂದ ಹೊಂಡದ ಸರ್ಕಲ್ ಮಾರ್ಗವಾಗಿ ಬಾರ್‌ಲೈನ್ ರಸ್ತೆ ಮೂಲಕ ರೈಲ್ವೆ ನಿಲ್ದಾಣದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಆಕಸ್ಮಿಕವಾಗಿ ಸುಮಾರು 50 ಗ್ರಾಂ ತೂಕದ ಬಂಗಾರದ ಆಭರಣಗಳಿದ್ದ ಪರ್ಸ್‌ನ್ನು ಕಳೆದುಕೊಂಡಿದ್ದರು. ಬಳಿಕ ಅವರು ಬಸವನಗರ ಪೊಲೀಸ್ ಠಾಣೆಗೆ ದೂರು ನೀಡಿ ಪರ್ಸ್ ಪತ್ತೆ ಮಾಡುವಂತೆ ಮನವಿ ಮಾಡಿದ್ದರು.

ದೂರಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಅಪರಾಧ ವಿಭಾಗದ ಸಿಬ್ಬಂದಿ ಫಕೃದ್ದೀನ್ ಅಲಿ ಹಾಗೂ ಟಿ.ಸುರೇಶ್ ಅವರು ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ತನಿಖೆ ವೇಳೆ ಶಿವಾಜಿ ಸರ್ಕಲ್ ಸಮೀಪ ಪರ್ಸ್ ಬಿದ್ದಿರುವುದು ದೃಢಪಟ್ಟಿತು.

ನಂತರ ಸುತ್ತಮುತ್ತಲಿನ ಅಂಗಡಿ ಮಾಲೀಕರನ್ನು ವಿಚಾರಿಸಿದಾಗ, ಸ್ಥಳೀಯ ಬೀಡಾ ಅಂಗಡಿಯ ಮಾಲೀಕರೊಬ್ಬರು ಪರ್ಸ್‌ನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದು, ವಾರಸುದಾರರು ಬಂದರೆ ಹಿಂತಿರುಗಿಸುವ ಉದ್ದೇಶದಿಂದ ತೆಗೆದಿಟ್ಟಿದ್ದ ವಿಚಾರ ಬೆಳಕಿಗೆ ಬಂತು.

ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಪತ್ತೆಯಾದ ಪರ್ಸ್ ಹಾಗೂ ಅದರಲ್ಲಿದ್ದ ಸುಮಾರು 50 ಗ್ರಾಂ ಬಂಗಾರದ ಆಭರಣಗಳನ್ನು ಪರಿಶೀಲಿಸಿ, ನಿಜವಾದ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಪೊಲೀಸರ ತ್ವರಿತ ಕಾರ್ಯಾಚರಣೆ ಹಾಗೂ ಸಾರ್ವಜನಿಕರ ಪ್ರಾಮಾಣಿಕ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.