SK Home Ad
Home ಸುದ್ದಿ ದೇಶ ಬಕ್ರೀದ್‌ಗೆ ಕರೆದು ಕೊಲೆಗೈದ ಅಸದ್‌ ಪೊಲೀಸರ ಎನ್‌ಕೌಂಟರ್‌ಗೆ ಬಲಿ

ಬಕ್ರೀದ್‌ಗೆ ಕರೆದು ಕೊಲೆಗೈದ ಅಸದ್‌ ಪೊಲೀಸರ ಎನ್‌ಕೌಂಟರ್‌ಗೆ ಬಲಿ

0
142

ಘಾಜಿಯಾಬಾದ್: ಬಕ್ರೀದ್‌ ಹಬ್ಬಕ್ಕೆ ಆಹ್ವಾನಿಸಿ ಸ್ನೇಹಿತನನ್ನು ಕೊಲೆಗೈದ ಆರೋಪಿ ಅಸದ್‌ ಶನಿವಾರ ತಡರಾತ್ರಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.

ಉತ್ತರ ಪ್ರದೇಶದ ಘಾಜಿಯಾಬಾದ್‌ನ ಖೋಡಾ ಪ್ರದೇಶದಲ್ಲಿ ಮೇ 28ರಂದು ಹಬ್ಬದ ದಿನದಂದು ಸೂರ್ಯ ಪ್ರತಾಪ್ ಚೌಹಾಣ್ ಎಂಬಾತನನ್ನು ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು.

ಆಗ ಗಂಭೀರವಾಗಿ ಗಾಯಗೊಂಡ ಸೂರ್ಯನನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆತ ಮರುದಿನ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದ.

ಸೂರ್ಯ ಪ್ರತಾಪ್ ಚೌಹಾಣ್ ಸಾವು ಸ್ಥಳೀಯರ ಮತ್ತು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವು ಸಂಘಟನೆಗಳು ಪ್ರತಿಭಟಿಸಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಪತ್ತೆಯಾಗದ ಅಸದ್‌ಗಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದರು.

ಶನಿವಾರ ತಡರಾತ್ರಿ ಅಸದ್‌ ಪರಾರಿಯಾಗಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾನೆ ಎನ್ನುವ ಖಚಿತ ಮಾಹಿತಿ ಪಡೆದುಕೊಂಡಿದ್ದ ಪೊಲೀಸರು, ಸ್ನೇಹಿತನ ಬಳಿ ಹಣ ತೆಗದುಕೊಳ್ಳಲು ಖೋರಾ ಪ್ರದೇಶಕ್ಕೆ ಬರಲಿದ್ದ ಆತನಿಗಾಗಿ ಬಲೆ ಬೀಸಿದ್ದರು.

ಈ ವೇಳೆ ಅಸದ್ ವ್ಯಕ್ತಿಯೋರ್ವನೊಂದಿಗೆ ಬೈಕ್‌ನಲ್ಲಿ ಆ ಸ್ಥಳಕ್ಕೆ ಬಂದಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆ ಅಸದ್ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರು ಪ್ರತಿದಾಳಿ ನಡೆಸಿದಾಗ ಅಸದ್‌ಗೆ ಗುಂಡೇಟು ತಗುಲಿದೆ.

ಗಾಯಗೊಂಡಿದ್ದ ಅಸದ್‌ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಅಧಿಕಾರಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಸದ್ ಎನ್‌ಕೌಂಟರ್ ಬಳಿಕ ಮೃತ ಸೂರ್ಯ ಪ್ರತಾಪ್ ಚೌಹಾಣ್ ತಾಯಿ ಮಾತನಾಡಿ, ‘ನನ್ನ ಮಗನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಆರೋಪಿಗಳ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದ್ದಾರೆ.