SK Home Ad
Home ನಮ್ಮ ಜಿಲ್ಲೆ ಬೆಳಗಾವಿ ನಕಲಿ ಫೇಸ್‌ಬುಕ್‌ ಖಾತೆಯಿಂದ ಜಾರಕಿಹೊಳಿ ವಿರುದ್ಧ ಪೋಸ್ಟ್‌: ದೂರು

ನಕಲಿ ಫೇಸ್‌ಬುಕ್‌ ಖಾತೆಯಿಂದ ಜಾರಕಿಹೊಳಿ ವಿರುದ್ಧ ಪೋಸ್ಟ್‌: ದೂರು

0
138

ಬೆಳಗಾವಿ: ‘ಕರುನಾಡ ಕುರುಬಗೌಡ್ರು’ ಹಾಗೂ ‘ಬಂಡಾಯ ಧ್ವನಿ’ ಹೆಸರಿನ ನಕಲಿ ಫೇಸ್‌ಬುಕ್‌ ಖಾತೆಗಳ ಮೂಲಕ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ವಿರುದ್ಧ ಅವಹೇಳನಕಾರಿ ಹಾಗೂ ಸುಳ್ಳು ಪೋಸ್ಟ್‌ ಹಾಕಲಾಗಿದೆ ಎಂದು ಆರೋಪಿಸಿ ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಅವರು ಬೆಳಗಾವಿ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ನಕಲಿ ಖಾತೆಯಲ್ಲಿ, ‘ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ವಿರುದ್ಧ 37 ಶಾಸಕರಿಂದ ಸತೀಶ್‌ ಜಾರಕಿಹೊಳಿ ಸಹಿ ಸಂಗ್ರಹಿಸಿದ್ದಾರೆ’ ಎಂಬ ಗಂಭೀರ ಆರೋಪ ಮಾಡಲಾಗಿದೆ.

ಆದರೆ, ಈ ಆರೋಪವನ್ನು ಸ್ವತಃ ಸತೀಶ್‌ ಜಾರಕಿಹೊಳಿ ಅವರು ನಿರಾಕರಿಸಿದ್ದಾರೆ. ಅವರ ರಾಜಕೀಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಇಂತಹ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪೋಸ್ಟ್‌ ಕೇವಲ ವ್ಯಕ್ತಿಗತ ಅವಹೇಳನವಲ್ಲ; ಕುರುಬ ಮತ್ತು ವಾಲ್ಮೀಕಿ ಸಮಾಜಗಳ ನಡುವೆ ಗೊಂದಲ, ಅವಿಶ್ವಾಸ ಹಾಗೂ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನವಾಗಿದೆ ಎಂದು ತಳವಾರ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿಗಳನ್ನು ಹರಡಿ ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಸಂಚು ಇದರ ಹಿಂದೆ ಇದೆ ಎಂದು ಅವರು ಹೇಳಿದ್ದಾರೆ.

ನಕಲಿ ಫೇಸ್‌ಬುಕ್‌ ಖಾತೆಗಳನ್ನು ಸೃಷ್ಟಿಸಿದವರು ಹಾಗೂ ಅವಹೇಳನಕಾರಿ ಪೋಸ್ಟ್‌ ಹಾಕಿದವರನ್ನು ತಕ್ಷಣ ಪತ್ತೆಹಚ್ಚಿ, ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜಶೇಖರ ತಳವಾರ ಅವರು ಸೈಬರ್‌ ಕ್ರೈಂ ಪೊಲೀಸರನ್ನು ಒತ್ತಾಯಿಸಿದ್ದಾರೆ.