ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ನಾಯಕ ಘೋಷಣೆ ಸಾಧ್ಯತೆ
ನವದೆಹಲಿ/ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆಯನ್ನು ನಾಳೆ ಕರೆಯಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಡಿ. ಕೆ. ಶಿವಕುಮಾರ, ನೂತನ ನಾಯಕತ್ವದ ಕುರಿತು ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಎಲ್ಲ ಶಾಸಕರೂ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಪಕ್ಷದ ರಾಷ್ಟ್ರೀಯ ನಾಯಕತ್ವದ ಸೂಚನೆ ಮೇರೆಗೆ ಕೇಂದ್ರದ ವೀಕ್ಷಕರು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಹುಲ್ ಭೇಟಿಯಾದ ಸಿದ್ದರಾಮಯ್ಯ: ಅಪ್ಪುಗೆ ಫೋಟೋ ವೈರಲ್
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವದ ಆಯ್ಕೆ ಕುರಿತ ಚರ್ಚೆಗಳು ವೇಗ ಪಡೆದುಕೊಂಡಿವೆ. ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು ಎನ್ನಲಾಗುತ್ತಿದೆ.
ಈ ನಡುವೆ ನೂತನ ಸಚಿವ ಸಂಪುಟ ರಚನೆ ಹಾಗೂ ಆಡಳಿತದ ಮುಂದಿನ ರೂಪುರೇಷೆಗಳ ಬಗ್ಗೆ ದೆಹಲಿಯಲ್ಲಿ ಮಹತ್ವದ ಮಾತುಕತೆಗಳು ನಡೆದಿವೆ. ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕ ಕೆ.ಜೆ. ಜಾರ್ಜ್ ಸೇರಿದಂತೆ ಹಲವು ಪ್ರಮುಖ ನಾಯಕರೊಂದಿಗೆ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ನಿಧನ
ಸಚಿವ ಸಂಪುಟದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಸಮತೋಲನ ಕಾಪಾಡುವ ಕುರಿತು ಕೂಡ ಚರ್ಚೆ ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹಳೆಯ ಸಚಿವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಹಾಗೂ ಹೊಸ ಮುಖಗಳಿಗೆ ಎಷ್ಟು ಸ್ಥಾನ ನೀಡಲಾಗುತ್ತದೆ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಹೆಚ್ಚಾಗಿದೆ.
ಪಕ್ಷದ ಹೈಕಮಾಂಡ್ ನಾಯಕತ್ವವೂ ಕರ್ನಾಟಕದ ಬೆಳವಣಿಗೆಗಳ ಮೇಲೆ ನಿಕಟವಾಗಿ ಗಮನ ಹರಿಸಿದ್ದು, ನಾಯಕತ್ವ ಬದಲಾವಣೆ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ನಡೆಯುವಂತೆ ಕ್ರಮ ಕೈಗೊಳ್ಳುತ್ತಿದೆ. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಅಧಿಕೃತಗೊಳಿಸುವ ಸಾಧ್ಯತೆ ಇದೆ.
ರಾಜಕೀಯ ವಲಯದಲ್ಲಿ ಮುಖ್ಯಮಂತ್ರಿ ಪಟ್ಟಾಭಿಷೇಕದ ದಿನಾಂಕ ಮತ್ತು ಸಚಿವ ಸಂಪುಟದ ಮೊದಲ ಹಂತದ ರಚನೆ ಕುರಿತು ಚರ್ಚೆಗಳು ಜೋರಾಗಿದ್ದು, ಶಾಸಕಾಂಗ ಸಭೆಯ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬರುವ ನಿರೀಕ್ಷೆಯಿದೆ.






















