SK Home Ad
Home ಸುದ್ದಿ ದೇಶ El Nino ಪ್ರಭಾವ: ಈ ಬಾರಿ ದೇಶದಲ್ಲಿ ಕಡಿಮೆ ಮಳೆ ಸಾಧ್ಯತೆ

El Nino ಪ್ರಭಾವ: ಈ ಬಾರಿ ದೇಶದಲ್ಲಿ ಕಡಿಮೆ ಮಳೆ ಸಾಧ್ಯತೆ

0
169

2026ರ ಮಾನ್ಸೂನ್ ಬಗ್ಗೆ IMD ಎಚ್ಚರಿಕೆ: ದಕ್ಷಿಣ ಭಾರತಕ್ಕೆ ಮಳೆ ಕೊರತೆ ಭೀತಿ

ನವದೆಹಲಿ: 2026ರ ನೈಋತ್ಯ ಮಾನ್ಸೂನ್ ಅವಧಿಯಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಎಚ್ಚರಿಕೆ ನೀಡಿದೆ.

ಎಲ್-ನಿನೋ (El Niño) ಹವಾಮಾನ ಮಾದರಿಯ ಪರಿಣಾಮದಿಂದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆ ಪ್ರಮಾಣ ಕುಸಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಎರಡನೇ ಹಂತದ ದೀರ್ಘಾವಧಿಯ ಮುನ್ಸೂಚನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Asian Games ಟ್ರಯಲ್ಸ್‌ ಭಾಗವಹಿಸಲು ವಿನೇಶ್‌ಗೆ ಸುಪ್ರೀಂ ಅನುಮತಿ

ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ, ದೇಶಾದ್ಯಂತ ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಯ ಸುಮಾರು 90 ಪ್ರತಿಶತದಷ್ಟಿರಲಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು. ಮಾದರಿಯ ದೋಷ ಪ್ರಮಾಣ ಪ್ಲಸ್ ಅಥವಾ ಮೈನಸ್ ನಾಲ್ಕು ಪ್ರತಿಶತದಷ್ಟಿದೆ ಎಂದೂ ಅವರು ಮಾಹಿತಿ ನೀಡಿದರು.

ಉತ್ತರ ಭಾರತದಲ್ಲಿ ಮಳೆ ಸಾಮಾನ್ಯ: ಐಎಂಡಿ ಪ್ರಕಾರ, ಉತ್ತರ ಭಾರತದಲ್ಲಿ ಮಳೆ ಸಾಮಾನ್ಯ ಮಟ್ಟದಲ್ಲಿರುವ ಸಾಧ್ಯತೆ ಇದ್ದರೂ, ದಕ್ಷಿಣ ಭಾರತ, ಕೇಂದ್ರ ಭಾರತ ಮತ್ತು ವಾಯುವ್ಯ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ಆದರೆ ದಕ್ಷಿಣ ಭಾರತದ ಪೂರ್ವ ಭಾಗದ ಕೆಲವು ಪ್ರದೇಶಗಳು, ಈಶಾನ್ಯ ಭಾರತ ಮತ್ತು ಜಮ್ಮು ಮತ್ತು ಕಾಶ್ಮಿರ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ನಂದಿನಿ

ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ M. ರವಿಚಂದ್ರನ್‌ ಮಾತನಾಡಿ, ಎಲ್-ನಿನೋ ಬೆಳವಣಿಗೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದರು. ಜೂನ್ ಮತ್ತು ಜುಲೈ ತಿಂಗಳಲ್ಲಿ ಇದು ಪ್ರಾಥಮಿಕ ಹಂತದಲ್ಲಿದ್ದು, ಆಗಸ್ಟ್ ವೇಳೆಗೆ ಮಧ್ಯಮ ಹಂತ ತಲುಪಿ ನಂತರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಎಲ್-ನಿನೋ ಪರಿಣಾಮದಿಂದ ಮಳೆಯ ಪ್ರಮಾಣ ಕುಸಿಯುವ ಜೊತೆಗೆ ದೇಶದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವೂ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ವಿಶೇಷವಾಗಿ ಜೂನ್ ತಿಂಗಳಲ್ಲಿ ದೇಶದ ಅನೇಕ ಭಾಗಗಳಲ್ಲಿ ಬಿಸಿಗಾಳಿಯ ಪರಿಸ್ಥಿತಿ ಗಂಭೀರವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: IPLನಲ್ಲಿ ಸ್ಮಾರ್ಟ್ ಸನ್‌ಗ್ಲಾಸ್ ನಿಷೇಧಿಸಿದ BCCI

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಬಿಹಾರ, ಒಡಿಶಾ, ಛತ್ತೀಸ್‌ಗಢ ಹಾಗೂ ಗುಜರಾತ್‌ ರಾಜ್ಯಗಳ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆ (Heatwave) ಪರಿಸ್ಥಿತಿ ಕಂಡುಬರುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.

ವಾಯುವ್ಯ, ಮಧ್ಯ ಮತ್ತು ದಕ್ಷಿಣ ಭಾರತ: ಕರ್ನಾಟಕ ಸೇರಿದಂತೆ ದಕ್ಷಿಣ ಪರ್ಯಾಯ ದ್ವೀಪ, ಮಧ್ಯ ಭಾರತ ಹಾಗೂ ವಾಯುವ್ಯ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜೂನ್ ತಿಂಗಳಲ್ಲಿ ವಾಯುವ್ಯ ಭಾರತ, ಈಶಾನ್ಯ ಭಾರತ ಹಾಗೂ ದಕ್ಷಿಣ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ಮಾತ್ರ ಸಾಮಾನ್ಯ ಅಥವಾ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಡಾ. ಮೊಹಾಪಾತ್ರ ಹೇಳಿದರು.

ಇದನ್ನೂ ಓದಿ: ತೀರ್ಪು ವಿಳಂಬಕ್ಕೆ ಬ್ರೇಕ್: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ

ಕಡಿಮೆ ಮಳೆಗೆ ಕಾರಣ: ‘ಎಲ್ ನಿನೋ’ (El Niño) ಪ್ರಭಾವಮುಂಗಾರು ಅವಧಿಯಲ್ಲಿ (ಜೂನ್‌ನಿಂದ ಸೆಪ್ಟೆಂಬರ್) ಪೆಸಿಫಿಕ್ ಮಹಾಸಾಗರದಲ್ಲಿ ‘ಎಲ್ ನಿನೋ’ ಪರಿಸ್ಥಿತಿಗಳು ಸಕ್ರಿಯಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದು ಮುಂಗಾರು ಮಾರುತಗಳ ತೀವ್ರತೆಯನ್ನು ಕುಗ್ಗಿಸಿ, ಮಳೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ

ಕೃಷಿ ವಲಯದ ಮೇಲೆ ದೊಡ್ಡ ಪರಿಣಾಮ: ಹವಾಮಾನ ತಜ್ಞರ ಪ್ರಕಾರ, ಎಲ್-ನಿನೋ ಪರಿಣಾಮ ಕೃಷಿ ವಲಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಮಳೆ ಆಧಾರಿತ ಕೃಷಿ ಮಾಡುವ ರಾಜ್ಯಗಳಲ್ಲಿ ನೀರಿನ ಕೊರತೆ ಮತ್ತು ಬೆಳೆ ಉತ್ಪಾದನೆಯಲ್ಲಿ ಕುಸಿತದ ಆತಂಕ ವ್ಯಕ್ತವಾಗಿದೆ. ರೈತರು ಹಾಗೂ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರಾಹುಲ್ ಭೇಟಿಯಾದ ಸಿದ್ದರಾಮಯ್ಯ: ಅಪ್ಪುಗೆ ಫೋಟೋ ವೈರಲ್

2026ರ ಮಾನ್ಸೂನ್ ಪರಿಸ್ಥಿತಿಯನ್ನು ದೇಶದ ಕೃಷಿ, ಜಲಸಂಪನ್ಮೂಲ ಮತ್ತು ವಿದ್ಯುತ್ ಉತ್ಪಾದನಾ ಕ್ಷೇತ್ರಗಳು ಆತಂಕದಿಂದ ಗಮನಿಸುತ್ತಿದ್ದು, ಮುಂದಿನ ಕೆಲವು ವಾರಗಳಲ್ಲಿ ಹವಾಮಾನ ಸ್ಥಿತಿಗತಿ ಮತ್ತಷ್ಟು ಸ್ಪಷ್ಟವಾಗುವ ಸಾಧ್ಯತೆ ಇದೆ.