ಸಿದ್ದರಾಮಯ್ಯ ರಾಜಕೀಯ ಪಯಣದ ಜೀವನಚರಿತ್ರೆ: ವಕೀಲರಿಂದ ಮುಖ್ಯಮಂತ್ರಿವರೆಗೆ ಹೋರಾಟ, ಅಧಿಕಾರ ಮತ್ತು ರಾಜೀನಾಮೆ
ಬೆಂಗಳೂರು: ಮೈಸೂರು ಜಿಲ್ಲೆಯ ಸಣ್ಣ ಹಳ್ಳಿಯಾದ ಸಿದ್ದರಾಮನಹುಂಡಿಯಿಂದ ಹೊರಟು ಕರ್ನಾಟಕದ ಅತ್ಯಂತ ಪ್ರಭಾವಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ಬೆಳೆದ ಸಿದ್ದರಾಮಯ್ಯ ಅವರ ರಾಜಕೀಯ ಪಯಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ, ಐದು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿ ಮತ್ತೆ ಅಧಿಕಾರಕ್ಕೆ ಬಂದಾಗ, ಪಕ್ಷದ ಹಿರಿಯ ನಾಯಕ ಹಾಗೂ ಅಹಿಂದ ರಾಜಕಾರಣದ ಮುಖಂಡರಾಗಿದ್ದ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸುವ ಮೂಲಕ ಕಾಂಗ್ರೆಸ್ ಸಮತೋಲನ ಸಾಧಿಸಿತ್ತು. ಮೂರು ವರ್ಷಗಳ ಆಡಳಿತದ ಬಳಿಕ ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ತ್ಯಜಿಸಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕುಗ್ರಾಮದಿಂದ ಆರಂಭವಾದ ಪಯಣ : ಸಿದ್ದರಾಮಯ್ಯ ಅವರು ಆಗಸ್ಟ್ 3, 1947 ರಂದು ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿ ಗ್ರಾಮದಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು. ತಂದೆ ಸಿದ್ದರಾಮೇಗೌಡ ಹಾಗೂ ತಾಯಿ ಬೋರಮ್ಮ. ಬಾಲ್ಯದಲ್ಲಿ ಆರ್ಥಿಕ ಸಂಕಷ್ಟಗಳ ನಡುವೆ ಬೆಳೆದ ಅವರು ಹತ್ತು ವರ್ಷ ವಯಸ್ಸಿನ ನಂತರವೇ ಶಾಲಾ ಶಿಕ್ಷಣ ಆರಂಭಿಸಿದ್ದರು. ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ ಹಾಗೂ ಕಾನೂನು ಪದವಿ ಪೂರ್ಣಗೊಳಿಸಿದರು.
ಕಾಲೇಜು ದಿನಗಳಲ್ಲೇ ಉತ್ತಮ ವಾಗ್ಮಿಯಾಗಿ ಹೆಸರು ಮಾಡಿದ್ದ ಸಿದ್ದರಾಮಯ್ಯ, ವಕೀಲರಾಗಿ ವೃತ್ತಿ ಆರಂಭಿಸಿದರು. ಈ ಅವಧಿಯಲ್ಲಿ ರೈತ ನಾಯಕ ನಂಜುಂಡಸ್ವಾಮಿ ಅವರ ಪ್ರಭಾವಕ್ಕೆ ಒಳಗಾದ ಅವರು ರಾಜಕೀಯಕ್ಕೆ ಕಾಲಿಟ್ಟರು.
ಜನತಾ ಪರಿವಾರದಿಂದ ರಾಜಕೀಯ ಉದಯ : 1983ರಲ್ಲಿ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಸಾಮಾನ್ಯ ಹಿನ್ನೆಲೆಯಿಂದ ಬಂದ ಯುವ ನಾಯಕನ ಗೆಲುವು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು.
ಜನತಾ ಪಕ್ಷ ಸೇರ್ಪಡೆಯಾದ ಬಳಿಕ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದ ಅವರು, 1985ರಲ್ಲಿ ಮತ್ತೆ ಗೆದ್ದು ಪಶುಸಂಗೋಪನೆ ಸಚಿವರಾಗಿದರು. ಇದೇ ಅವಧಿಯಲ್ಲಿ ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಒಗ್ಗೂಡಿಸುವ ‘ಅಹಿಂದ’ ಪರಿಕಲ್ಪನೆಯನ್ನು ಬಲಪಡಿಸಿದರು.
ಹಣಕಾಸು ಸಚಿವರಿಂದ DCMವರೆಗೆ : 1994ರಲ್ಲಿ ಎಚ್.ಡಿ. ದೇವೇಗೌಡ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ, ತಮ್ಮ ಬಜೆಟ್ ಮಂಡನೆಗಳ ಮೂಲಕ ಆಡಳಿತ ಸಾಮರ್ಥ್ಯ ತೋರಿಸಿದರು. ಬಳಿಕ 1996ರಲ್ಲಿ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
1999ರಲ್ಲಿ ಚುನಾವಣೆಯಲ್ಲಿ ಸೋಲು ಕಂಡರೂ, 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಡಿಸಿಎಂ ಸ್ಥಾನಕ್ಕೇರಿದರು. ಆದರೆ ದೇವೇಗೌಡರೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದ ಜೆಡಿಎಸ್‌ನಿಂದ ಉಚ್ಚಾಟನೆಗೊಂಡರು.
ಕಾಂಗ್ರೆಸ್ ಸೇರ್ಪಡೆ ಮತ್ತು CM ಹಾದಿ : 2006ರಲ್ಲಿ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದ್ದ ಸಿದ್ದರಾಮಯ್ಯ, ಶೀಘ್ರದಲ್ಲೇ ಪಕ್ಷದ ಪ್ರಮುಖ ನಾಯಕನಾಗಿ ಹೊರಹೊಮ್ಮಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿದರು.
2013ರಿಂದ 2018ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದ ಅವರು, ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಹಿಂದುಳಿದ ವರ್ಗಗಳ ಪರ ಧ್ವನಿಯಾಗಿ ರಾಜ್ಯ ರಾಜಕೀಯದಲ್ಲಿ ವಿಶಿಷ್ಟ ಗುರುತು ಮೂಡಿಸಿದರು.
ದಾಖಲೆಗಳ ಸರದಾರ : ಸಿದ್ದರಾಮಯ್ಯ ಅವರು ಕರ್ನಾಟಕ ಇತಿಹಾಸದಲ್ಲಿ 17 ಬಾರಿ ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2026ರ ಮಾರ್ಚ್‌ನಲ್ಲಿ ಅವರು ದಾಖಲೆಯ 17ನೇ ಬಜೆಟ್ ಮಂಡಿಸಿದ್ದರು. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಾಖಲೆಯನ್ನು ಹಿಂದಿಕ್ಕಿ ಕರ್ನಾಟಕದ ಅತ್ಯಂತ ಸುದೀರ್ಘಾವಧಿ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು.
ರಾಜೀನಾಮೆಯೊಂದಿಗೆ ಅಂತ್ಯವಾದ ಅಧ್ಯಾಯ: ಎರಡನೇ ಅವಧಿಯಲ್ಲಿ ಮೂರು ವರ್ಷ ಪೂರೈಸಿದ ಸಿದ್ದರಾಮಯ್ಯ, ಮೇ 28, 2026ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ತೆಗೆದುಕೊಂಡ ಈ ನಿರ್ಧಾರವನ್ನು ಅವರು ಸಚಿವರ ಉಪಾಹಾರ ಕೂಟದಲ್ಲೇ ಘೋಷಿಸಿದರು.
ಅದೇ ವೇಳೆ ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸಂದೇಶವನ್ನೂ ನೀಡಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಕರ್ನಾಟಕ ರಾಜಕೀಯದ ಅತ್ಯಂತ ಪ್ರಭಾವಿ ನಾಯಕರೊಬ್ಬರ ಆಡಳಿತದ ಮಹತ್ವದ ಅಧ್ಯಾಯ ಅಂತ್ಯಗೊಂಡಿದೆ.





















