SK Home Ad
Home ನಮ್ಮ ಜಿಲ್ಲೆ ಕಲಬುರಗಿ ಕಲ್ಯಾಣ ಕರ್ನಾಟಕಕ್ಕೆ ಖರ್ಗೆಯೇ ಬಲ: DCM ಮಾಡಲು ಒತ್ತಾಯ

ಕಲ್ಯಾಣ ಕರ್ನಾಟಕಕ್ಕೆ ಖರ್ಗೆಯೇ ಬಲ: DCM ಮಾಡಲು ಒತ್ತಾಯ

0
71

ಪ್ರಿಯಾಂಕ ಖರ್ಗೆಗೆ ಡಿಸಿಎಂ ಸ್ಥಾನ ನೀಡಲಿ: ಕಲಬುರಗಿಯಲ್ಲಿ ವಿಶೇಷ ಪೂಜೆ

ಸಂ.ಕ.ಸಮಾಚಾರ ಕಲಬುರಗಿ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗೆ ನೇಮಿಸಬೇಕು ಎಂಬ ಒತ್ತಾಯ ಕಲಬುರಗಿಯಲ್ಲಿ ಜೋರಾಗಿದೆ. ಪ್ರಿಯಾಂಕ ಖರ್ಗೆ ಅಭಿಮಾನಿಗಳ ಬಳಗ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿಯ ನೇತೃತ್ವದಲ್ಲಿ ಗುರುವಾರ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು.

ಸಮಿತಿಯ ಜಿಲ್ಲಾಧ್ಯಕ್ಷ ಶಿವಾನಂದ ಹೊನಗುಂಟಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದರು. ರಾಜ್ಯ ಸರ್ಕಾರದಲ್ಲಿ ಸಂಭವಿಸಬಹುದಾದ ರಾಜಕೀಯ ಬದಲಾವಣೆಗಳ ಸಂದರ್ಭದಲ್ಲಿ ಪ್ರಿಯಾಂಕ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಅವರು ಬಹಿರಂಗವಾಗಿ ಮುಂದಿಟ್ಟರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಶಿವಾನಂದ ಹೊನಗುಂಟಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಿಯಾಂಕ ಖರ್ಗೆ ಮಹತ್ವದ ಪಾತ್ರವಹಿಸಿದ್ದರು ಎಂದು ಹೇಳಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪಿಎಸ್‌ಐ ನೇಮಕಾತಿ ಅಕ್ರಮ, ಕೆಕೆಆರ್‌ಡಿಬಿ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಬಹಿರಂಗಪಡಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.

ಪ್ರಿಯಾಂಕ ಖರ್ಗೆ ಅವರು ಐಟಿ-ಬಿಟಿ ಸಚಿವರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ರಾಜ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಹೊಸ ದಿಕ್ಕು ನೀಡಿದ್ದರು. ಇದೇ ಕಾರಣಕ್ಕೆ ಕೈಗಾರಿಕಾ ವಲಯ ಹಾಗೂ ಐಟಿ-ಬಿಟಿ ಕ್ಷೇತ್ರದ ಪ್ರಮುಖರು ಮತ್ತೊಮ್ಮೆ ಅವರಿಗೆ ಅದೇ ಖಾತೆ ನೀಡುವಂತೆ ಒತ್ತಾಯಿಸಿದ್ದರು ಎಂದು ಅವರು ತಿಳಿಸಿದರು.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ದೂರದೃಷ್ಟಿಯ ನಾಯಕತ್ವ ಹೊಂದಿರುವ ಪ್ರಿಯಾಂಕ ಖರ್ಗೆ ಅವರಿಗೆ ಡಿಸಿಎಂ ಹುದ್ದೆ ನೀಡಿದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತಷ್ಟು ಶಕ್ತಿ ಸಿಗಲಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟರು. ಚಿತ್ತಾಪುರ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅವರು ನೀಡಿರುವ ಆದ್ಯತೆಯನ್ನು ಉಲ್ಲೇಖಿಸಿದ ಕಾರ್ಯಕರ್ತರು, ಜಿಲ್ಲೆಯ ಜನರಲ್ಲಿ ಅವರ ಬಗ್ಗೆ ವಿಶ್ವಾಸ ಹೆಚ್ಚಿದೆ ಎಂದು ಹೇಳಿದರು.

ಇದೇ ವೇಳೆ ಕೋಲಿ ಸಮಾಜದ ಮುಖಂಡರಾದ ರಾಯಪ್ಪ ಹೊನಗುಂಟಿ, ಬಸವರಾಜ ಸೋಮಪುರ ಹಾಗೂ ಶರಣಪ್ಪ ಹೊಸೂರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಸಮುದಾಯದ ಜನಸಂಖ್ಯೆ ಹೆಚ್ಚಿದ್ದು, ಸಮುದಾಯದ ಸಮಸ್ಯೆಗಳಿಗೆ ಪ್ರಿಯಾಂಕ ಖರ್ಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು. ಕೋಲಿ, ಕಬ್ಬಲಿಗ, ಬೆಸ್ತ, ಮೊಗವೀರ ಮತ್ತು ಅಂಬಿಗ ಸಮುದಾಯಗಳಿಗೆ ಎಸ್‌ಟಿ ಮಾನ್ಯತೆ ನೀಡುವ ವಿಚಾರದಲ್ಲೂ ಅವರು ಸ್ಪಂದನೆ ನೀಡುತ್ತಿರುವುದರಿಂದ ಅವರನ್ನು ಡಿಸಿಎಂ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಪ್ರಾರ್ಥನಾ ಕಾರ್ಯಕ್ರಮದಲ್ಲಿ ಅಶ್ವಿನ ಸಂಕಾ, ಪರಶುರಾಮ ನಾಡೇಕಾರ್ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪ್ರಿಯಾಂಕ ಖರ್ಗೆ ಬೆಂಬಲಿಗರು ಭಾಗವಹಿಸಿದ್ದರು. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ರಾಜಕೀಯವಾಗಿ ಗಮನ ಸೆಳೆಯುತ್ತಿದೆ.