SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿ: ಬೊಮ್ಮನಳ್ಳಿ ಜಲಾಶಯದಲ್ಲಿ ಕಾಡಾನೆ ಸಾವು

ದಾಂಡೇಲಿ: ಬೊಮ್ಮನಳ್ಳಿ ಜಲಾಶಯದಲ್ಲಿ ಕಾಡಾನೆ ಸಾವು

0
152

ದಾಂಡೇಲಿ: ದಾಂಡೇಲಿ ಸಮೀಪದ ಬೊಮ್ಮನಳ್ಳಿ ಜಲಾಶಯದ ಹಿನ್ನೀರಿನಲ್ಲಿ ಸುಮಾರು 24 ವರ್ಷದ ಕಾಡಾನೆಯೊಂದು (ಗಂಡಾನೆ) ಮೃತಪಟ್ಟಿರುವ ಘಟನೆ ಪರಿಸರಾಸಕ್ತರು ಮತ್ತು ವನ್ಯಜೀವಿ ಪ್ರೇಮಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ನೀರಿನಲ್ಲಿ ತೇಲುತ್ತಿದ್ದ ಕಾಡಾನೆಯ ಮೃತದೇಹದ ಮಾಹಿತಿ ದೊರಕುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ದಂಡೆಗೆ ತಂದಿದ್ದಾರೆ. ಅದರ ಅಂತ್ಯಸಂಸ್ಕಾರವನ್ನು ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ.

ಪ್ರಾಥಮಿಕವಾಗಿ ಕಾಡಾನೆ ಸಾವಿನ ಕಾರಣ ಸ್ಪಷ್ಟವಾಗಿಲ್ಲ. ಆದರೆ ಕಳೆದ ವರ್ಷ ಇದೇ ಭಾಗದ ಕಾಡಿನಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಡಾನೆಯೊಂದು ಮೃತಪಟ್ಟ ಘಟನೆ ಇನ್ನೂ ಜನಮನದಲ್ಲಿ ಹಸಿಯಾಗಿರುವ ಸಂದರ್ಭದಲ್ಲೇ ಮತ್ತೊಂದು ಕಾಡಾನೆ ಸಾವನ್ನಪ್ಪಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಕೇವಲ ಪ್ರಾಕೃತಿಕ ಸಾವುಗಳ ಸರಣಿಯೇ, ಅಥವಾ ಮಾನವ ಚಟುವಟಿಕೆಗಳಿಂದ ವನ್ಯಜೀವಿಗಳ ಜೀವಕ್ಕೆ ಅಪಾಯ ಉಂಟಾಗುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ದಾಂಡೇಲಿ ಅರಣ್ಯ ಪ್ರದೇಶವು ಜೈವ ವೈವಿಧ್ಯತೆಯ ಪ್ರಮುಖ ನೆಲೆಯಾಗಿದ್ದು, ಕಾಡಾನೆಗಳ ಸಂಚಾರಕ್ಕೆ ಪ್ರಸಿದ್ಧವಾಗಿದೆ. ಆದರೆ ಅರಣ್ಯ ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪ, ಅಕ್ರಮ ವಿದ್ಯುತ್ ಸಂಪರ್ಕ, ಜಲಾಶಯಗಳ ಸುತ್ತಲಿನ ಅಪಾಯಕಾರಿ ಪರಿಸ್ಥಿತಿ, ಮತ್ತು ಅರಣ್ಯ ಮಾರ್ಗಗಳ ಅತಿಕ್ರಮಣ ವನ್ಯಜೀವಿಗಳ ಜೀವಕ್ಕೆ ಸವಾಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.