ಸುಳ್ಯ: ಅರಂತೋಡು ಗ್ರಾಮದ ಅಡ್ತಲೆ ಬೆದ್ರುಪಣೆ ಎಂಬಲ್ಲಿ ಮರಿ ಆನೆಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಬೆದ್ರುಪಣೆಯ ಸ್ಥಳೀಯರ ತೋಟದ ಮಧ್ಯೆ ಅಂದಾಜು ಒಂದು ವರ್ಷ ಪ್ರಾಯದ ಮರಿ ಆನೆ ಮೃತಪಟ್ಟ ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಕಂಡು ಬಂದಿತ್ತು.
ಭಾನುವಾರ ರಾತ್ರಿಯಿಂದ ಈ ಭಾಗದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಕೃಷಿ ಹಾನಿ ಮಾಡಿತ್ತು. ಈ ಹಿಂಡಿನಲ್ಲಿದ್ದ ಹೆಣ್ಣು ಮರಿ ಆನೆ ಸಾವನ್ನಪ್ಪಿದೆ. ಮರಿ ಆನೆಯ ದೇಹದಲ್ಲಿ ಅಲ್ಲಲ್ಲಿ ಗಾಯಗಳು ಕಾಣಿಸಿಕೊಂಡಿದೆ. ದೊಡ್ಡ ಆನೆಯ ಆಕ್ರಮಣದಿಂದ ಗಾಯಗೊಂಡು ಆನೆ ಮರಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸುಳ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ವನ್ಯಜೀವಿ ತಜ್ಞರಾದ ಡಾ. ಯಶಸ್ವಿ ಅವರು ಆಗಮಿಸಿ ಮರಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಆನೆಯ ಮೃತದೇಹವನ್ನು ದಫನ ಮಾಡಲಾಯಿತು.
ಆನೆ ಮರಿಯ ದೇಹದಲ್ಲಿ ಅಲ್ಲಲ್ಲಿ ಗಾಯದ ಗುರುತುಗಳಿದ್ದು ಆನೆಯ ದೇಹದ ಒಳಗಡೆ ಗಾಯಗಳಿಂದ ರಕ್ತಸ್ರಾವ ಉಂಟಾಗಿದ್ದು, ರಕ್ತ ಹೆಪ್ಪುಗಟ್ಟಿತ್ತು ಮತ್ತು ಅಂಗಾಂಗಗಳಿಗೆ ಹಾನಿ ಉಂಟಾಗಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರುಗಳು ತಿಳಿಸಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಡಿನಲ್ಲಿ ಇರುವ ಗಂಡು ಆನೆ ಅಥವಾ ಹೊರಗಿನಿಂದ ಬಂದ ಗಂಡು ಆನೆಯು ಮರಿ ಆನೆಯ ಮೇಲೆ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.






















