ಢಾಕಾ: ಅಮೆರಿಕ ಅಧ್ಯಕ್ಷರ ಹೆಸರುಗಳು ಜಾಗತಿಕ ರಾಜಕೀಯದಲ್ಲಿ ಸದಾ ಮುಂಚೂಣಿಯಲ್ಲಿರುತ್ತವೆ. ಆದ್ರೆ ಬಾಂಗ್ಲಾದೇಶದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿನ ಅಪರೂಪದ ಎಮ್ಮೆಯೊಂದು ಇಡೀ ದೇಶದ ಗಮನ ಸೆಳೆದಿದೆ. ತನ್ನ ವಿಶಿಷ್ಟ ನೋಟ ಹಾಗೂ ಭಾರೀ ಮೊತ್ತದ ವ್ಯಾಪಾರದಿಂದಾಗಿ ಈ ಎಮ್ಮೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್ ಆಗುತ್ತಿದ್ದು, ಸುದ್ದಿ ಮಾಧ್ಯಮಗಳಲ್ಲೂ ಸದ್ದು ಮಾಡುತ್ತಿದೆ.
ಬಾಂಗ್ಲಾದೇಶದ ನಾರಾಯಣಗಂಜ್ ಜಿಲ್ಲೆಯ ಖಾಸಗಿ ಫಾರಂ ಒಂದರಲ್ಲಿ ಬೆಳೆಸಲಾಗಿರುವ ಈ ಎಮ್ಮೆ ನೋಡುಗರ ಕಣ್ಣು ಕೋರೈಸುವಂತಿದೆ. ಇದು ಅತ್ಯಂತ ಅಪರೂಪದ ‘ಅಲ್ಟಿನೋ’ ತಳಿಗೆ ಸೇರಿದ್ದಾಗಿದ್ದು, ಇದರ ಮೈಮೇಲಿರುವ ಹೊಂಬಣ್ಣದ ಕೂದಲುಗಳು ಪ್ರಮುಖ ಆಕರ್ಷಣೆಯಾಗಿದೆ. ಈ ವಿಶಿಷ್ಟ ಹೊಂಬಣ್ಣ ಹಾಗೂ ರಾಜ ಗಾಂಭೀರ್ಯದ ನೋಟದಿಂದಾಗಿಯೇ ಫಾರಂ ಮಾಲೀಕರು ಇದಕ್ಕೆ ಯುಎಸ್ ಅಧ್ಯಕ್ಷ ‘ಟ್ರಂಪ್’ ಎಂದು ನಾಮಕರಣ ಮಾಡಿದ್ದರು. ಅಂದಿನಿಂದಲೂ ಈ ಎಮ್ಮೆ ಸ್ಥಳೀಯವಾಗಿ ಭಾರೀ ಕುತೂಹಲ ಮೂಡಿಸಿತ್ತು.
ಅಲ್ಲದೇ.. ಮುಸ್ಲಿಮರ ಪವಿತ್ರ ಹಬ್ಬವಾದ ‘ಈದ್-ಉಲ್-ಅದಾ’ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, ಹಬ್ಬದ ಕುರ್ಬಾನಿ ಆಚರಣೆಗಾಗಿ ಈ ಎಮ್ಮೆಯನ್ನು ಮಾರುಕಟ್ಟೆಗೆ ತರಲಾಗಿತ್ತು. ಇದರ ಅಪರೂಪದ ಸೌಂದರ್ಯಕ್ಕೆ ಮಾರುಹೋದ ಢಾಕಾ ಮೂಲದ ಪ್ರಮುಖ ಉದ್ಯಮಿಯೊಬ್ಬರು ತಡಮಾಡದೆ, ಬರೋಬ್ಬರಿ ಐವತ್ತು ಲಕ್ಷ ಟಾಕಾ (ಬಾಂಗ್ಲಾದೇಶದ ಕರೆನ್ಸಿ) ಕೊಟ್ಟು ಈ ಎಮ್ಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ.. ಸ್ಥಳೀಯ ಮಾರುಕಟ್ಟೆಯ ಇತಿಹಾಸದಲ್ಲೇ ಎಮ್ಮೆಯೊಂದು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸದ್ಯ ಹಬ್ಬದ ಸೀಸನ್‌ನಲ್ಲಿ ‘ಟ್ರಂಪ್’ ಎಮ್ಮೆಯ ಖರೀದಿ ಪ್ರಕ್ರಿಯೆ ಮತ್ತು ಅದರ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಹಾಗೇ ಸಾಮಾಜಿಕ ಜಾಲತಾಣದಲ್ಲಿ ಈ ʻಟ್ರಂಪ್ʼ ಎಮ್ಮಯದ್ದೇ ಟ್ರೆಂಡ್ ಜೋರಾಗಿದೆ.




















