ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ವಿಡಂಬನಾತ್ಮಕ ರಾಜಕೀಯ ಚಳುವಳಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯ ಅಧಿಕೃತ ‘X’ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷವಾದ ಬಿಜೆಪಿಯನ್ನು ಹಿಂದಿಕ್ಕಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿರುವುದು ಸದ್ಯ ರಾಜಕೀಯ ಹಾಗೂ ಡಿಜಿಟಲ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಕಳೆದ ಕೆಲವು ದಿನಗಳಿಂದ ಮೀಮ್ಸ್, ವ್ಯಂಗ್ಯ ಹಾಗೂ ಚುರುಕಿನ ರಾಜಕೀಯ ಸಂದೇಶಗಳ ಮೂಲಕ ಯುವಜನರಲ್ಲಿ ಸಿಜೆಪಿ ಭಾರೀ ಜನಪ್ರಿಯತೆ ಗಳಿಸಿತ್ತು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪರೀಕ್ಷಾ ಪತ್ರಿಕೆ ಸೋರಿಕೆ ಹಾಗೂ ವ್ಯವಸ್ಥೆಯ ಹೊಣೆಗಾರಿಕೆಯ ಕುರಿತು ಯುವಜನರಿಗಿರುವ ಅಸಮಾಧಾನವನ್ನು ಈ ಚಳುವಳಿ ವ್ಯಂಗ್ಯಾತ್ಮಕವಾಗಿ ಅಭಿವ್ಯಕ್ತಿಸುತ್ತಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯ ಅಧಿಕೃತ ಖಾತೆಯು 8.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಈ ಸಿಜೆಪಿ ಖಾತೆಯು ಕೇವಲ ಎರಡೇ ದಿನಗಳಲ್ಲಿ ಬರೋಬ್ಬರಿ 14.5 ಮಿಲಿಯನ್ ಗಡಿ ದಾಟಿ ಇತಿಹಾಸ ಸೃಷ್ಟಿಸಿತ್ತು.
ಖಾತೆ ಮುಚ್ಚಲ್ಪಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ, “ಇದು ದೇಶದ ನಿಷ್ಕ್ರಿಯ ರಾಜಕೀಯ ಪಕ್ಷಗಳ ವಿರುದ್ಧ ಯುವಜನರು ನಡೆಸುತ್ತಿರುವ ಡಿಜಿಟಲ್ ದಂಗೆಯ ಸಂಕೇತವಾಗಿದೆ. ಭ್ರಷ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ಯುವ ಪೀಳಿಗೆ ಎಚ್ಚೆತ್ತುಕೊಂಡಿದ್ದು, ದೇಶದಲ್ಲಿ ದೊಡ್ಡ ಬದಲಾವಣೆ ಬಯಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ. ಸದ್ಯ ಯುವಕರು ತಮ್ಮ ವೈಯಕ್ತಿಕ ಖಾತೆಗಳ ಮೂಲಕ ವಿಡಿಯೋಗಳನ್ನು ಮಾಡಿ ಈ ಅಭಿಯಾನವನ್ನು ಮತ್ತಷ್ಟು ವೈರಲ್ ಮಾಡುತ್ತಿದ್ದಾರೆ.
ವಿಶೇಷವೆಂದರೆ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಾಗೂ ಕೀರ್ತಿ ಆಜಾದ್ ಅವರಂತಹ ಪ್ರಮುಖ ರಾಜಕಾರಣಿಗಳು ಸಹ ಈ ವಿಭಿನ್ನ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಮಹುವಾ ಮೊಯಿತ್ರಾ ಅವರು ‘X’ ನಲ್ಲಿ ವ್ಯಂಗ್ಯವಾಗಿ ಟ್ವೀಟ್ ಮಾಡಿ, “ನಾನು ಈಗಾಗಲೇ ರಾಷ್ಟ್ರವಿರೋಧಿ ಪಕ್ಷದ ಕಾರ್ಡ್ ಹೊಂದಿರುವ ಸದಸ್ಯೆಯಾಗಿದ್ದೇನೆ, ಹಾಗಾಗಿ ನನಗೂ ಸಿಜೆಪಿ ಪಕ್ಷ ಸೇರಲು ಇಷ್ಟವಿದೆ” ಎಂದು ಬರೆದುಕೊಂಡಿದ್ದಾರೆ.
“ಯುವಕರಿಂದ, ಯುವಜನರಿಗಾಗಿ, ಯುವಜನರ ರಾಜಕೀಯ ರಂಗ” ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಸಿಜೆಪಿ, “ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ ಮತ್ತು ಸೋಮಾರಿ” ಎಂಬ ವಿಭಿನ್ನ ಘೋಷಣೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಸದ್ಯ ಯುವಜನರು ತೋರುತ್ತಿರುವ ಈ ಉತ್ಸಾಹವನ್ನು ನೋಡಿದರೆ, ಇದು ಕೇವಲ ತಾತ್ಕಾಲಿಕ ಸದ್ದಾಗಿ ಉಳಿಯದೆ ಮುಂದಿನ ದಿನಗಳಲ್ಲಿ ದೇಶದ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಯುವಕರಲ್ಲಿ ಹೊಸ ಜಾಗೃತಿ ಮೂಡಿಸುವುದಂತೂ ಖಂಡಿತ ಎಂಬ ಮಾತುಗಳು ಕೇಳಿಬರುತ್ತಿವೆ.




















