Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಸವದಿ ಸರ್ಕಾರದಲ್ಲಿ ಮುಡದಾರಂದೇನು ಕೆಲ್ಸಾ- ಸಿದ್ದು ಸವದಿ

ಸವದಿ ಸರ್ಕಾರದಲ್ಲಿ ಮುಡದಾರಂದೇನು ಕೆಲ್ಸಾ- ಸಿದ್ದು ಸವದಿ

0
30

ಸೇತುವೆ ಕಾಮಗಾರಿಗೆ ರಾಜಕೀಯ ಬಣ್ಣ: ಸವದಿ-ಕೊಣ್ಣೂರ ನಡುವೆ ವಾಗ್ವಾದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಕುಸಿತ : 15 ದಿನಗಳಲ್ಲಿ ನೀರಿನ ಹಾಹಾಕಾರ?

ಬಾಗಲಕೋಟೆ (ತೇರದಾಳ): ಕರ್ನಾಟಕ ಉತ್ತರ ಭಾಗದಲ್ಲಿ ಮಹಿಷವಾಡಗಿ ಸೇತುವೆ ಕಾಮಗಾರಿಯು ಇದೀಗ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಪರೋಕ್ಷ ವಾಗ್ವಾದ ತೀವ್ರಗೊಂಡಿದೆ. ಇದೇ ವೇಳೆ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಬೆಂಬಲಿತ ಮುಖಂಡ ಸಿದ್ದು ಕೊಣ್ಣೂರ ಅವರು ಕಾರ್ಯಕರ್ತರೊಂದಿಗೆ ಮಹಿಷವಾಡಗಿ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ವೇಗ ಹೆಚ್ಚಲು ತಾವೇ ಕಾರಣ ಎಂದು ಹೇಳಿಕೆ ನೀಡುತ್ತಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರುವಾರ ಶಾಸಕ ಸಿದ್ದು ಸವದಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಬಳಿಕ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ತೇರದಾಳ ಕ್ಷೇತ್ರದಲ್ಲಿ ಸವದಿ ಸರ್ಕಾರ: “ಕಳೆದ ಚುನಾವಣೆಯಲ್ಲಿ ಸೋತಿರುವ ತೇರದಾಳ ಕ್ಷೇತ್ರದಲ್ಲಿ ಅವರಿಂದ ಏನು ಕೆಲಸ ಆಗಿದೆ? ಏನಿದ್ದರೂ ತೇರದಾಳ ಕ್ಷೇತ್ರದಲ್ಲಿ ಸವದಿ ಸರ್ಕಾರವೇ ಇದೆ” ಎಂದು ಸವದಿ ಹೇಳುವ ಮೂಲಕ ಕಾಂಗ್ರೆಸ್ ಮುಖಂಡರ ವಿರುದ್ಧ ಟೀಕೆ ಮಾಡಿದರು.

ಸರ್ಕಾರದ ಯೋಜನೆಗಳು ಜನಪ್ರತಿನಿಧಿಗಳ ಮೂಲಕ ಜಾರಿಯಾಗುತ್ತವೆ. ಆದರೆ ಕೆಲವರು “ನಾನೇ ಮಾಡಿಸಿದ್ದೇನೆ” ಎಂದು ಜನರಲ್ಲಿ ತಪ್ಪು ಸಂದೇಶ ನೀಡಿ ‘ಶೋ ಮ್ಯಾನ್’ ಆಗಲು ಯತ್ನಿಸುತ್ತಿದ್ದಾರೆ. ಕಾಮಗಾರಿಗಳ ಮಧ್ಯ ಪ್ರವೇಶ ಮಾಡುವುದು ಹಾಸ್ಯಾಸ್ಪದ ಎಂದು ಅವರು ಆರೋಪಿಸಿದರು.

ಇದೇ ವೇಳೆ ರಬಕವಿ–ಮಹಿಷವಾಡಗಿ ಸೇತುವೆ ಕಾಮಗಾರಿಯ ಕುರಿತು ಮಾತನಾಡಿದ ಶಾಸಕ ಸವದಿ, “2017ರಲ್ಲಿ ಕೇವಲ ಶಂಕುಸ್ಥಾಪನೆ ಮಾತ್ರ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಒಟ್ಟು 55 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಕಾಂಗ್ರೆಸ್ ಪಕ್ಷ ಒಂದು ರೂಪಾಯಿ ಕೆಲಸವೂ ಮಾಡಿಲ್ಲ” ಎಂದು ಆರೋಪಿಸಿದರು.

ಇನ್ನೊಂದೆಡೆ, ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಗಂಭೀರವಾಗಿ ಕುಸಿದಿದ್ದು, ಬ್ಯಾರೇಜ್ ಇದೀಗ ಡೆಡ್ ಸ್ಟೋರೇಜ್ ಹಂತ ತಲುಪಿದೆ. ಒಟ್ಟು 6 ಟಿಎಂಸಿ ಸಾಮರ್ಥ್ಯ ಹೊಂದಿರುವ ಬ್ಯಾರೇಜ್‌ನಲ್ಲಿ ಸುಮಾರು 0.8 ಟಿಎಂಸಿ ಪ್ರಮಾಣದ ಡೆಡ್ ಸ್ಟೋರೇಜ್ ಮಾತ್ರ ಉಳಿದಿದೆ ಎಂದು ತಿಳಿದುಬಂದಿದೆ.

ಹಿನ್ನೀರಿನ ಪ್ರದೇಶಗಳಾದ ರಬಕವಿ-ಬನಹಟ್ಟಿ, ತೇರದಾಳ, ಅಥಣಿ ಸೇರಿದಂತೆ ನೂರಾರು ಗ್ರಾಮಗಳಲ್ಲಿ ನೀರಿನ ಕೊರತೆ ಭೀತಿ ಎದುರಾಗಿದೆ. ಮುಂದಿನ 15 ದಿನಗಳಲ್ಲಿ ಮಳೆ ಅಥವಾ ನದಿಯಲ್ಲಿ ಹೊಸ ನೀರಿನ ಹರಿವು ಕಾಣದಿದ್ದರೆ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಸರ್ಕಾರ ಈಗಾಗಲೇ ಕೃಷಿ ಭೂಮಿಗಳಿಗೆ ನದಿಯ ನೀರಿನ ಬಳಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದು, ವಾರದಲ್ಲಿ ಎರಡು ದಿನಗಳ ಕಾಲ ಕೇವಲ ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಬಳಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರೈತರಿಗೆ ನೀರಿನ ಜೊತೆಗೆ ವಿದ್ಯುತ್ ಸಮಸ್ಯೆಯೂ ಎದುರಾಗುತ್ತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಆತಂಕ ಹೆಚ್ಚಾಗಿದೆ.

ಮುಂದಿನ ದಿನಗಳಲ್ಲಿ ಹಿಪ್ಪರಗಿ ಬ್ಯಾರೇಜ್ ನೀರು ಕೇವಲ ಜನ-ಜಾನುವಾರುಗಳ ಕುಡಿಯುವ ಅಗತ್ಯಕ್ಕೆ ಮಾತ್ರ ಸೀಮಿತವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.