Home Advertisement
Home ನಮ್ಮ ಜಿಲ್ಲೆ ಮೈಸೂರು ₹55 ಲಕ್ಷ ಸಾಲ ವಿವಾದಕ್ಕೆ ತಿರುವು: ವಿಶ್ವನಾಥ್ ವಿರುದ್ಧ FIR ದಾಖಲು

₹55 ಲಕ್ಷ ಸಾಲ ವಿವಾದಕ್ಕೆ ತಿರುವು: ವಿಶ್ವನಾಥ್ ವಿರುದ್ಧ FIR ದಾಖಲು

0
79

MP ಅವಧಿಯ ಸಾಲದ ಹಣ ವಾಪಸ್ ವಿಚಾರಕ್ಕೆ MLC ವಿರುದ್ಧ ಕಾನೂನು ಕ್ರಮ

ಮೈಸೂರು: ಅಡಗೂರು ವಿಶ್ವನಾಥ್ ವಿರುದ್ಧ ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿಗೆ ಹಲ್ಲೆ ನಡೆಸಿದ ಆರೋಪದಡಿ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಎಫ್‌ಐಆರ್ ದಾಖಲಿಸಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.

ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ದೂರುದಾರರ ಪ್ರಕಾರ, 2013ರಲ್ಲಿ ಅಡಗೂರು ವಿಶ್ವನಾಥ್ ಅವರು ಸಂಸದರಾಗಿದ್ದ ಅವಧಿಯಲ್ಲಿ, MTB ನಾಗರಾಜ್ ಅವರ ಮುಖಾಂತರ ವಿಶ್ವನಾಥ್ ಹಾಗೂ ಅವರ ಪುತ್ರ ಅಮಿತ್ ದೇವರಹಟ್ಟಿಗೆ ಒಟ್ಟು ₹55 ಲಕ್ಷ ಹಣವನ್ನು ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.

ಸಾಲವಾಗಿ ಪಡೆದ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದರೂ, ಹಲವು ವರ್ಷಗಳಿಂದ ಹಣ ಮರಳಿಸದೇ ಸತಾಯಿಸುತ್ತಿದ್ದಾರೆ ಎಂದು ಕೋಟೆಹುಂಡಿ ಮಹದೇವು ಆರೋಪಿಸಿದ್ದಾರೆ.

ದೂರು ಪ್ರಕಾರ, ಫೆಬ್ರವರಿ 2026ರಲ್ಲಿ ವಿಶ್ವನಾಥ್ ಅವರು ಜಲದರ್ಶಿನಿಯಲ್ಲಿ ಇದ್ದ ವೇಳೆ ಕೋಟೆಹುಂಡಿ ಮಹದೇವು ಅವರು ಹಣದ ವಿಚಾರವಾಗಿ ಭೇಟಿ ಮಾಡಿದ್ದರು. ಈ ವೇಳೆ ವಿಶ್ವನಾಥ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ನಂತರ ಮಹದೇವು ಅವರು ದೇವರಾಜ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (Non-Cognizable Report) ದಾಖಲಿಸಿದ್ದರು. ಆದರೆ ನಂತರ ನ್ಯಾಯಾಲಯದ ಮೊರೆ ಹೋಗಿ, ಪ್ರಕರಣ ದಾಖಲಿಸುವಂತೆ ಆದೇಶ ಪಡೆದುಕೊಂಡಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಇದೀಗ ಎಂಎಲ್ಸಿ ಅಡಗೂರು ವಿಶ್ವನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಕರಣ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಆರೋಪಗಳಿಗೆ ಸಂಬಂಧಿಸಿದಂತೆ ವಿಶ್ವನಾಥ್ ಅವರ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.