Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ನವ ಮಂಗಳೂರು ಬಂದರಿಗೆ ಆಗಮಿಸಿದ ಐಷಾರಾಮಿ ಕ್ರೂಸ್ ಹಡಗು

ನವ ಮಂಗಳೂರು ಬಂದರಿಗೆ ಆಗಮಿಸಿದ ಐಷಾರಾಮಿ ಕ್ರೂಸ್ ಹಡಗು

0
70

ಮಂಗಳೂರು: ನವ ಮಂಗಳೂರು ಬಂದರುಗೆ ಪ್ರವಾಸಿ ವರ್ಷದ ಐದನೇ ಹಾಗೂ ಕೊನೆಯ ಐಷಾರಾಮಿ ಕ್ರೂಸ್ ಹಡಗು ‘ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್’ ಮಂಗಳವಾರ ಭವ್ಯವಾಗಿ ಆಗಮಿಸಿತು.

ಬಹಾಮಾಸ್ ಧ್ವಜ ಹೊಂದಿರುವ ಈ ಐಷಾರಾಮಿ ಹಡಗನ್ನು Norwegian Cruise Line ಸಂಸ್ಥೆ ನಿರ್ವಹಿಸುತ್ತಿದ್ದು, ಮಾಲೆ–ಕೊಚ್ಚಿನ್–ಮಂಗಳೂರು–ಗೋವಾ–ಮುಂಬಯಿ ಸಂಪರ್ಕಿಸುವ ಅಂತಾರಾಷ್ಟ್ರೀಯ ಕ್ರೂಸ್ ಮಾರ್ಗದ ಭಾಗವಾಗಿ ಮಂಗಳೂರಿಗೆ ಬಂದಿಳಿದಿದೆ. ಹಡಗಿನಲ್ಲಿ ಒಟ್ಟು 427 ಪ್ರಯಾಣಿಕರು ಹಾಗೂ 372 ಸಿಬ್ಬಂದಿ ಇದ್ದರು.

ಹಡಗು ಬಂದರಿಗೆ ಆಗಮಿಸುತ್ತಿದ್ದಂತೆ ಪ್ರವಾಸಿಗರಿಗೆ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಶೈಲಿಯಲ್ಲಿ ಆತ್ಮೀಯ ಸ್ವಾಗತ ಕೋರಲಾಯಿತು. ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಹಾಗೂ ಸಂಬಂಧಿತ ಸಂಸ್ಥೆಗಳು ಪ್ರವಾಸಿಗರಿಗಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿತ್ತು. ನಗರದ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ, ಮಾರ್ಗದರ್ಶಿತ ಪ್ರವಾಸ, ಸಾಂಸ್ಕೃತಿಕ ಪರಿಚಯ ಕಾರ್ಯಕ್ರಮಗಳು ಹಾಗೂ ಧ್ಯಾನ ತರಗತಿಗಳನ್ನು ಆಯೋಜಿಸಲಾಗಿತ್ತು.

‘ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್’ ಆಗಮನದೊಂದಿಗೆ ಈ ವರ್ಷದ ಕ್ರೂಸ್ ಪ್ರವಾಸೋದ್ಯಮ ಸೀಸನ್ ಮುಕ್ತಾಯಗೊಂಡಿದ್ದು, ಒಟ್ಟು ಐದು ಬೃಹತ್ ಕ್ರೂಸ್ ಹಡಗುಗಳು ನವ ಮಂಗಳೂರು ಬಂದರಿಗೆ ಭೇಟಿ ನೀಡಿವೆ. ಈ ಅವಧಿಯಲ್ಲಿ ಒಟ್ಟು 2,079 ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಎನ್‌ಎಂಪಿಎ ಮಾಹಿತಿ ನೀಡಿದೆ.

ಈ ಸಾಧನೆಯ ಮೂಲಕ ಭಾರತದ ಪಶ್ಚಿಮ ಕರಾವಳಿಯಲ್ಲಿ ನವ ಮಂಗಳೂರು ಬಂದರು ಪ್ರಮುಖ ಕ್ರೂಸ್ ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಕರಾವಳಿ ಕರ್ನಾಟಕದ ಕಡಲತೀರಗಳು, ಐತಿಹಾಸಿಕ ದೇವಾಲಯಗಳು, ಪರಂಪರೆ ತಾಣಗಳು, ಪರಿಸರ ಪ್ರವಾಸೋದ್ಯಮ ಕೇಂದ್ರಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ ಕೆ.ವಿ. ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಭೇಟಿ ನೀಡಿ ಕ್ರೂಸ್ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಪರಿಶೀಲನಾ ಸಭೆ ನಡೆಸಿದರು.

ಗಣ್ಯರನ್ನು ಎನ್‌ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಹಾಗೂ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಸಭೆಯಲ್ಲಿ ಬಂದರಿನ ಕ್ರೂಸ್ ಟರ್ಮಿನಲ್ ಮೂಲಸೌಕರ್ಯ, ಪ್ರಯಾಣಿಕರ ನಿರ್ವಹಣಾ ವ್ಯವಸ್ಥೆ, ವಲಸೆ ಮತ್ತು ಕಸ್ಟಮ್ಸ್ ಸೌಲಭ್ಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ ಅವರು ಬಂದರಿನಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಿ ಮತ್ತು ವಿದೇಶಿ ಐಷಾರಾಮಿ ಕ್ರೂಸ್ ಹಡಗುಗಳನ್ನು ಮಂಗಳೂರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.