Home Advertisement
Home ಕ್ರೀಡೆ IPL 2026: ಪ್ಲೇಆಫ್‌ ಸನಿಹಕ್ಕೆ ರಾಜಸ್ಥಾನ್‌ ರಾಯಲ್ಸ್‌

IPL 2026: ಪ್ಲೇಆಫ್‌ ಸನಿಹಕ್ಕೆ ರಾಜಸ್ಥಾನ್‌ ರಾಯಲ್ಸ್‌

0
9

ಜೈಪುರ: ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್‌‌ ತಂಡ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

ಲಖನೌ ನೀಡಿದ್ದ 220 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್‌ 5 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದು, ಪ್ಲೇಆಫ್‌ ಸನಿಹಕ್ಕೆ ಬಂದು ನಿಂತಿದೆ.

ಯಶಸ್ವಿ ಜೈಸ್ವಾಲ್‌ ಮತ್ತು ವೈಭವ್‌ ಸೂರ್ಯವಂಶಿ ಜೋಡಿ ಉತ್ತಮ ಆರಂಭವನ್ನು ನೀಡಿತು. ಜೈಸ್ವಾಲ್‌ 23 ಎಸೆತದಲ್ಲಿ 8 ಬೌಂಡರಿ, 1 ಸಿಕ್ಸರ್‌ನಿಂದ 43 ರನ್‌ಗಳಿಸಿ ಆಕಾಶ ಸಿಂಗ್‌ ಎಸೆತದಲ್ಲಿ ರಿಷಭ್‌ ಪಂತ್‌ಗೆ ಕ್ಯಾಚ್‌ ನೀಡಿ ಔಟಾದರು.

ಎರಡನೇ ವಿಕೆಟ್‌ಗೆ ವೈಭವ್‌ ಮತ್ತು ಧ್ರುವ್ ಜುರೆಲ್ ಜೋಡಿ 45 ಎಸೆತದಲ್ಲಿ 105 ರನ್‌ಗಳ ಜತೆಯಾಟ ನಡೆಸಿತು. ಈ ವೇಳೆ ವೈಭವ್‌ 38 ಎಸೆತದಲ್ಲಿ 7 ಬೌಂಡರಿ, 10 ಭರ್ಜರಿ ಸಿಕ್ಸರ್‌ ಸೇರಿದಂತೆ 93 ರನ್‌ಗಳಿಸಿ ಹೊರನಡೆದರು.

ಪ್ರಿಟೋರಿಯಸ್ ಕೇವಲ 7 ರನ್‌ಗಳಿಸಿ ರನೌಟ್‌ಗೆ ಬಲಿಯಾದರು. ಧ್ರುವ್ ಜುರೆಲ್ 38 ಎಸೆತದಲ್ಲಿ 3 ಬೌಂಡರಿ, 3 ಸಿಕ್ಸರ್‌ನಿಂದ ಅಜೇಯ 53 ರನ್‌ ಗಳಿಸಿದರೆ, ಡೊನೊವನ್ ಫೆರೀರಾ 16 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್‌ ಲೆಕ್ಕಾಚಾರವನ್ನು ಆರಂಭದಲ್ಲಿಯೇ ಮಿಚೆಲ್‌ ಮಾರ್ಷ್‌ ಮತ್ತು ಜೋಶ್ ಇಂಗ್ಲಿಸ್ ಉಲ್ಟಾ ಮಾಡಿತು.

ಮೊದಲ ಓವರ್‌ನಿಂದಲೇ ಬೌಲರ್‌ಗಳನ್ನು ದಂಡಿಸಲು ಶುರು ಮಾಡಿದ ಆರಂಭಿಕ ಜೋಡಿ 8 ಓವರ್‌ಗಳಾಗುವಷ್ಟರಲ್ಲಿಯೇ ತಂಡದ ಮೊತ್ತವನ್ನು 100 ಗಡಿ ದಾಟಿಸಿತು.

ಜೋಶ್ ಇಂಗ್ಲಿಸ್ ಕೇವಲ 29 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ನಿಂದ 60 ರನ್‌ಗಳಿಸಿ ಯಶ್ ರಾಜ್ ಪೂಂಜಾ ಅವರಿಗೆ ವಿಕೆಟ್‌ ಒಪ್ಪಿಸಿದರು. ನಿಕೋಲಸ್ ಪೂರನ್ ಕ್ರಿಸ್‌ಗೆ ಬರುತ್ತಿದ್ದಂತೆ 2 ಸಿಕ್ಸರ್‌ ಬಾರಿಸಿ ಕೇವಲ 16 ರನ್‌ಗಳಿಗೆ ಆಟ ಮುಗಿಸಿದರು.

ಮೂರನೇ ವಿಕೆಟ್‌ಗೆ ಮಿಚೆಲ್‌ ಮಾರ್ಷ್‌ ಜತೆಯಾದ ನಾಯಕ ರಿಷಭ್‌ ಪಂತ್‌ 23 ಎಸೆತದಲ್ಲಿ 35 ರನ್‌ಗಳಿಸಿ, 64 ರನ್‌ಗಳ ಜತೆಯಾಟ ನಡೆಸಿ ಅನಗತ್ಯ ರನ್‌ ಕದಿಯಲು ಹೋಗಿ ಬಲಿಯಾದರು.

ಕೊನೆಯ ಓವರ್‌ ಮೊದಲ ಎಸೆತದಲ್ಲಿ ಪಂತ್‌ ಹೊರನಡೆದರೆ, ಅದೇ ಓವರ್‌ನ ಐದನೇ ಎಸೆತದಲ್ಲಿ ಮಿಚೆಲ್‌ ಮಾರ್ಷ್‌ ಎರಡು ರನ್‌ ಕದಿಯಲು ಹೋಗಿ ರನೌಟ್‌ ಆದರು.

ಮಿಚೆಲ್‌ ಮಾರ್ಷ್‌ ಕೇವಲ 57 ಎಸೆತದಲ್ಲಿ 11 ಬೌಂಡರಿ, 5 ಸಿಕ್ಸರ್‌ನಿಂದ 96 ರನ್‌ ಸಿಡಿಸಿ ಲಖನೌ ಬೃಹತ್‌ ಮೊತ್ತ ಪೇರಿಸುವಲ್ಲಿ ನೆರವಾದರು.

ರಾಜಸ್ಥಾನ ರಾಯಲ್ಸ್‌ ಪರ ಯಶ್ ರಾಜ್ ಪೂಂಜಾ 35ಕ್ಕೆ 2 ವಿಕೆಟ್‌ ಪಡೆದರೆ, ಜೋಫ್ರಾ ಆರ್ಚರ್ 39ಕ್ಕೆ ಒಂದು ವಿಕೆಟ್‌ ಪಡೆದರು.