Home Advertisement
Home ಕ್ರೀಡೆ IPL 2026: ಪ್ಲೇ ಆಫ್‌ಗೆ ಬೆಂಗಳೂರು ರಾಯಲ್‌ ಎಂಟ್ರಿ

IPL 2026: ಪ್ಲೇ ಆಫ್‌ಗೆ ಬೆಂಗಳೂರು ರಾಯಲ್‌ ಎಂಟ್ರಿ

0
85

ಧರ್ಮಶಾಲಾ: ವೆಂಕಟೇಶ ಅಯ್ಯರ್‌ ಮತ್ತು ವಿರಾಟ್‌ ಕೊಹ್ಲಿ ಸ್ಫೋಟಕ ಬ್ಯಾಟಿಂಗ್‌ ಮತ್ತು ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪಂಜಾಬ್‌ ಕಿಂಗ್ಸ್‌ ವಿರುದ್ಧ 23 ರನ್‌ಗಳ ಜಯ ದಾಖಲಿಸಿ, ಪ್ಲೇ ಆಫ್‌ಗೆ ಲಗ್ಗೆ ಇಟ್ಟ ಮೊದಲ ತಂಡ ಎನಿಸಿತು.

ಆರ್‌ಸಿಬಿ ನೀಡಿದ್ದ 223 ರನ್‌ಗಳ ಬೃಹತ್‌ ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಕೇವಲ 199 ರನ್‌ ಗಳಿಸಲಷ್ಟೇ ಶಕ್ತವಾಯಿತು

ಪಂಜಾಬ್‌ ಆರಂಭದಲ್ಲಿಯೇ 3.2 ಓವರ್‌ಗಳಲ್ಲಿ 19ಕ್ಕೆ 3 ವಿಕೆಟ್‌ ಕಳೆದುಕೊಂಡಿತು. ಪ್ರಿಯಾಂಶ್ ಆರ್ಯ (0), ಪ್ರಭಾಸಿಮ್ರಾನ್ ಸಿಂಗ್ (2) ಮತ್ತು ಶ್ರೇಯಸ್ ಅಯ್ಯರ್ (1) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಕೂಪರ್ ಕೊನೊಲಿ (37) ಮತ್ತು ಸೂರ್ಯಾಂಶ್ ಶೆಡ್ಜ್ (35) ತಂಡಕ್ಕೆ ಗೆಲುವು ತಂದು ಕೊಡಲು ಹೋರಾಡಿದರಾದರೂ ಅವರನ್ನು ಪೆವಿಲಿಯನ್‌ಗೆ ಕಳಿಸುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶ ಕಂಡರು.

ಕೊನೆಯಲ್ಲಿ ಶಶಾಂಕ್ ಸಿಂಗ್ ಕೇವಲ 27 ಎಸೆತದಲ್ಲಿ 4 ಬೌಂಡರಿ, 4 ಸಿಕ್ಸರ್‌ನಿಂದ 56 ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ, ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು.

ಇದಕ್ಕೂ ಮುನ್ನ, ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 222 ರನ್‌ ಪೇರಿಸಿತು.

2.2 ಓವರ್‌ಗಳಲ್ಲಿಯೇ ಆರಂಭಿಕ ಆಟಗಾರ ಜಾಕೋಬ್ ಬೆಥೆಲ್ (11) ವಿಕೆಟ್‌ ಕಳೆದುಕೊಂಡಿತು. ಆದರೆ ಬಳಿಕ ವಿರಾಟ್‌ ಕೊಹ್ಲಿ ಜತೆಗೂಡಿದ ದೇವದತ್ ಪಡಿಕ್ಕಲ್ ಆರಂಭದಲ್ಲಿಯೇ ಪಂಜಾಬ್‌ ಬೌಲರ್‌ಗಳನು ದಂಡಿಸಿಲು ಆರಂಭಿಸಿದರು.

ಈ ಜೋಡಿ 41 ಎಸೆತದಲ್ಲಿ 76 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತು. ಈ ವೇಳೆ ದೇವದತ್ ಪಡಿಕ್ಕಲ್ 25 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನಿಂದ 45 ರನ್‌ಗಳಿಸಿ ಹರ್‌ಪ್ರೀತ್ ಬ್ರಾರ್ ಎಸೆತದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಕ್ಯಾಚ್‌ ಕೊಟ್ಟು ಔಟಾದರು.

ಮೂರನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ವೆಂಕಟೇಶ ಅಯ್ಯರ್‌ ಪಂಜಾಬ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಲು ಆರಂಭಿಸಿದರು. ಈ ವೇಳೆ ವಿರಾಟ್‌ ಕೊಹ್ಲಿ 37 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನಿಂದ 58 ರನ್‌ಗಳಿಸಿ ಹೊರನಡೆದರು.

ಇನ್ನೊಂದು ತುದಿಯಲ್ಲಿ ವೆಂಕಟೇಶ ಅಯ್ಯರ್‌ 40 ಎಸೆತದಲ್ಲಿ 8 ಬೌಂಡರಿ, 4 ಸಿಕ್ಸರ್‌ನಿಂದ 73 ರನ್‌ಗಳಿಸಿ ಅಜೇಯರಾಗಿ ಉಳಿಸರೆ, ಟೀಮ್‌ ಡೇವಿಡ್ 12 ಎಸೆತದಲ್ಲಿ 2 ಬೌಂಡರಿ, 2 ಸಿಕ್ಸರ್‌ನಿಂದ 28 ರನ್‌ಗಳಿಸಿ ಕೊನೆಯ ಎಸೆತದಲ್ಲಿ ಔಟಾದರು.

ಪಂಜಾಬ್‌ ಕಿಂಗ್ಸ್‌ ಪರ ಹರ್‌ಪ್ರೀತ್ ಬ್ರಾರ್ 35ಕ್ಕೆ 2 ವಿಕೆಟ್‌ ಪಡೆದರೆ, ಯಜುವೇಂದ್ರ ಚಾಹಲ್ 42 ಕ್ಕೆ ಒಂದು ವಿಕೆಟ್‌ ಪಡೆದರು.