ಬಾಗಲಕೋಟೆ: ಬಾಗಲಕೋಟೆ-ಕುಡಚಿ ರೈಲು ಮಾರ್ಗ(142 ಕಿ.ಮೀ) ಕಾಮಗಾರಿ ಕುರಿತು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಇದೀಗ ಬೆಂಗಳೂರಿನಲ್ಲಿ ಕನ್ನಡ ಕಟ್ಟಾಳು ವಾಟಾಳ್ ನಾಗರಾಜರೊಂದಿಗೆ ಸಮಾಲೋಚನೆ ನಡೆಸಿ, ವಾಸ್ತವತೆ ತಿಳಿಸಿದರು. ಇದಕ್ಕೆ ಪೂರಕವಾಗಿ ಬೆಂಬಲ ವ್ಯಕ್ತಪಡಿಸಿದ ವಾಟಾಳ್, ಖಾಜಿಯವರ ಬೆಂಬಲಕ್ಕೆ ಕನ್ನಡ ಪರ ಸಂಘಟನೆಗಳಿಂದ ಬೆಂಬಲವಿದೆಯೆಂದು ಸ್ಪಷ್ಟನೆಯೊಂದಿಗೆ ಹೋರಾಟದ ರೂಪುರೇಷೆ ಚರ್ಚಿಸಲಾಯಿತೆಂದು ಖಾಜಿ ತಿಳಿಸಿದರು.
2012ರಲ್ಲಿ ಶುರುವಾದ ರೈಲು ಮಾರ್ಗ ಕಾರ್ಯ 142 ಕಿ.ಮೀ. ಪೈಕಿ ಕೇವಲ 41 ಕಿ.ಮೀ.ನಷ್ಟು ಕಾಮಗಾರಿ ನಡೆದಿದೆ. ಇನ್ನುಳಿದ 101 ಕಿ.ಮೀ.ನಷ್ಟು ಕಾರ್ಯದಲ್ಲಿ ಲೋಕಾಪೂರದಿಂದ ಯಾದವಾಡವರೆಗೆ 22 ಕಿ.ಮೀ.ನಷ್ಟು ಕಾಮಗಾರಿ ಪ್ರಗತಿಯಲ್ಲಿದ್ದರೆ ಯಾದವಾಡದಿಂದ ಜಮಖಂಡಿವರೆಗಿನ 28 ಕಿ.ಮೀ.ನಷ್ಟು ಕಾರ್ಯ ಇನ್ನೂ ನಡೆದಿಲ್ಲ. ಕಳೆದ ತಿಂಗಳಷ್ಟೇ ಹೋರಾಟ ಸಮಿತಿಯಿಂದ ಕುಡಚಿಯಲ್ಲಿ ಸತ್ಯಾಗ್ರಹ ನಡೆಸಿದ್ದರ ಪೂರಕವಾಗಿ ಕುಡಚಿಯಿಂದ-ಜಮಖಂಡಿವರೆಗಿನ 51 ಕಿ.ಮೀ.ನಷ್ಟು ಕೆಲಸ ಪ್ರಾರಂಭಿಸುವದಾಗಿ ಜನಪ್ರತಿನಿಧಿಗಳ ವಿಶ್ವಾಸದಿಂದ ಸತ್ಯಾಗ್ರಹ ಕೈ ಬಿಡಲಾಗಿತ್ತು.
ಅದೂ ಕಾರ್ಯ ಮಂದಗತಿಯಲ್ಲಿಯೇ ಸಾಗುತ್ತಿದೆ. ಭೂ ಸ್ವಾಧೀನ, ಟೆಂಡರ್ ಗುತ್ತಿಗೆ ಅರ್ಧಮರ್ಧ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿಯೋಜನೆಯಾಗದೆ ಕಾಮಗಾರಿಯನ್ನು ತೀವ್ರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಹಲವಾರು ಹೋರಾಟಗಳನ್ನು ನಡೆಸಿದರೂ ಕೆಲ ದಿನಗಳಷ್ಟೇ ಕಾರ್ಯ ನಡೆಸಿ ಮತ್ತೇ ಮಂದಗತಿಯೇ ಅನಿವಾರ್ಯವಾಗಿರುವುದು ಖೇದಕರವೆಂದು ಖಾಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಮಿತಿ ಚುರುಕು: ರೈಲ್ವೆ ಹೋರಾಟ ಸಮಿತಿಯು ಆಯಾ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಮಹತ್ವದ ಸಭೆಗಳನ್ನು ನಡೆಸುತ್ತಿದೆ. ಶೀಘ್ರ ಕಾಮಗಾರಿ ವೇಗಕ್ಕೆ ಸಂಸದರಿಗೆ ಬಿಸಿ ಮುಟ್ಟಿಸುವದರೊಂದಿಗೆ ರಾಜ್ಯ ಸರ್ಕಾರವೂ ಕಾಳಜಿಪೂರ್ವಕ ಕಾರ್ಯ ನಡೆಸುವಲ್ಲಿ ಮಹತ್ತರ ನಿರ್ಧಾರಕ್ಕೆ ಮಹತ್ತರ ಹೋರಾಟ ನಡೆಸುವ ಸಿದ್ಧತೆಗಳನ್ನು ಮಾಡಲಾಗುತ್ತಿದೆಯೆಂದು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ತಿಳಿಸಿದರು.
ಅಧಿಕಾರಿಗಳಿಗೆ ಕ್ಲಾಸ್: ರೈಲು ಕಾಮಗಾರಿಗೆ ಸಂಬಂಧಿಸಿದಂತೆ ಈಚೆಗೆ ಬಾಗಲಕೋಟೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಅಧಿಕಾರಿಗಳ ಮಹತ್ವದ ಸಭೆ ಕರೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ಸ್ವಾಗತಿಸುತ್ತೇನೆಂದು ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ತಿಳಿಸಿದರು.
ಸಂಸದರು ನಿರಂತರ ಅಧಿಕಾರಿಗಳಿಂದ ವಿವರಣೆ ಪಡೆಯುವುದರೊಂದಿಗೆ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿಗಳ ಅಡೆತಡೆಗಳನ್ನು ನಿವಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸದೆ ಮಹತ್ತರ ಯೋಜನೆಯನ್ನು ಸಾಕಾರಗೊಳಿಸುವ ಮೂಲಕ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಲಕ್ಷಾಂತರ ಜನತೆಯ ಯೋಜನೆ ಶೀಘ್ರ ಸಾಕಾರಗೊಳಿಸಬೇಕೆಂದು ಸಂಸದರಲ್ಲಿ ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷವಾಟಾಳ್ ನಾಗರಾಜ್, `ಉತ್ತರ ಕರ್ನಾಟಕದ ನಿರ್ಲಕ್ಷ್ಯ ನಡೆಯದು. ಬಹುದಿನಗಳ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಹೋರಾಟದಲ್ಲಿ ನಾವೂ ಸಹ ಧುಮುಕುವುದಲ್ಲದೆ ಕಾರ್ಯ ಶೀಘ್ರ ಪೂರ್ಣಗೊಳ್ಳುವಂತೆ ವಿನೂತನ ಹೋರಾಟ ನಡೆಸಲಾಗುವದು ಎಂದರು.






















