Home Advertisement
Home ಕ್ರೀಡೆ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ಶಿವಮೊಗ್ಗದಲ್ಲಿ IPL ಫ್ಯಾನ್ಸ್ ಪಾರ್ಕ್

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ಶಿವಮೊಗ್ಗದಲ್ಲಿ IPL ಫ್ಯಾನ್ಸ್ ಪಾರ್ಕ್

0
57
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ಸಂಭ್ರಮ ತರುವಂತೆ ಶಿವಮೊಗ್ಗ ನಗರದಲ್ಲಿ ʻಐಪಿಎಲ್ ಫ್ಯಾನ್ಸ್ ಪಾರ್ಕ್ʼ ಆರಂಭವಾಗುತ್ತಿದ್ದು, ಸಾವಿರಾರು ಅಭಿಮಾನಿಗಳು ಒಂದೇ ಸ್ಥಳದಲ್ಲಿ ಕುಳಿತು ಐಪಿಎಲ್ ಪಂದ್ಯ ವೀಕ್ಷಿಸುವ ಅಪರೂಪದ ಅವಕಾಶ ದೊರೆಯಲಿದೆ. ನಗರದ ಎನ್‌ಇಎಸ್ ಮೈದಾನದಲ್ಲಿ ಮೇ 16ರಿಂದ ಈ ವಿಶೇಷ ವ್ಯವಸ್ಥೆ ಆರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಮೂಡಿಸಿದೆ.

ಶಿವಮೊಗ್ಗ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಸಿಸಿಐ ಮಾಧ್ಯಮ ಪ್ರಮುಖ ರಾಘವೇಂದ್ರ ಅವರು, ಮೇ 16ರ ಸಂಜೆ ನಡೆಯಲಿರುವ ಗುಜರಾತ್ ಟೈಟನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯವನ್ನು ದೊಡ್ಡ ಪರದೆಯಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

RCB ಪಂದ್ಯ: ಮೇ 17ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯಗಳನ್ನೂ ಅಭಿಮಾನಿಗಳು ಇದೇ ಫ್ಯಾನ್ಸ್ ಪಾರ್ಕ್‌ನಲ್ಲಿ ವೀಕ್ಷಿಸಬಹುದು ಎಂದು ಹೇಳಿದರು.

ಸುಮಾರು ಐದು ಸಾವಿರಕ್ಕೂ ಹೆಚ್ಚು ಕ್ರಿಕೆಟ್ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕಂತೆ ಮೈದಾನದಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುವ ಅನುಭವವೇ ಸಿಗುವಂತೆ ದೊಡ್ಡ ಎಲ್‌ಇಡಿ ಪರದೆ, ಧ್ವನಿ ವ್ಯವಸ್ಥೆ ಹಾಗೂ ಅಭಿಮಾನಿಗಳಿಗಾಗಿ ಮುಕ್ತ ವಾತಾವರಣ ಸೃಷ್ಟಿಸಲಾಗಿದೆ ಎಂದು ತಿಳಿಸಿದರು.

ಬಹುತೇಕ ಅಭಿಮಾನಿಗಳಿಗೆ ನೇರವಾಗಿ ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸುವ ಅವಕಾಶ ಸಿಗುವುದಿಲ್ಲ. ಅಂತಹವರಿಗೆ ತಮ್ಮ ನಗರದಲ್ಲೇ ಸ್ಟೇಡಿಯಂ ಅನುಭವ ನೀಡುವ ಉದ್ದೇಶದಿಂದ ಈ ಫ್ಯಾನ್ಸ್ ಪಾರ್ಕ್ ಆಯೋಜಿಸಲಾಗಿದೆ ಎಂದು ರಾಘವೇಂದ್ರ ವಿವರಿಸಿದರು.

ಫ್ಯಾನ್ಸ್ ಪಾರ್ಕ್‌ನಲ್ಲಿ ಆಸನ ವ್ಯವಸ್ಥೆ ಇರುವುದಿಲ್ಲ. ಅಭಿಮಾನಿಗಳು ಕಾರ್ಪೆಟ್ ಮೇಲೆ ಕುಳಿತುಕೊಂಡು ಅಥವಾ ನಿಂತುಕೊಂಡೇ ಪಂದ್ಯ ವೀಕ್ಷಿಸಬಹುದಾಗಿದೆ. ಕ್ರಿಕೆಟ್ ಪಂದ್ಯ ವೀಕ್ಷಣೆಯ ಜೊತೆಗೆ ಆಹಾರ ಮಳಿಗೆಗಳು, ಗೇಮ್ ಝೋನ್, ಮನರಂಜನಾ ಚಟುವಟಿಕೆಗಳು ಸೇರಿದಂತೆ ಹಲವು ವಿಶೇಷ ಆಕರ್ಷಣೆಗಳನ್ನೂ ಸಿದ್ಧಪಡಿಸಲಾಗಿದೆ.

ಇದಲ್ಲದೆ, ಕ್ರಿಕೆಟ್ ಅಭಿಮಾನಿಗಳ ಮುಖಕ್ಕೆ ತಂಡದ ಬಣ್ಣದ ಪೇಂಟಿಂಗ್, ಘೋಷಣೆಗಳು, ಸಿಳ್ಳೆ, ಚೀರಾಟ, ಸ್ಟಂಟ್‌ಗಳು ಸೇರಿದಂತೆ ಕ್ರೀಡಾಂಗಣದ ಉತ್ಸಾಹಭರಿತ ವಾತಾವರಣವನ್ನು ಇಲ್ಲಿ ಮರುಸೃಷ್ಟಿಸಲಾಗುತ್ತಿದೆ. ಇದರಿಂದ ಅಭಿಮಾನಿಗಳಿಗೆ ನೇರವಾಗಿ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ನೋಡುತ್ತಿರುವ ಅನುಭವ ಸಿಗಲಿದೆ.

ಮುಖ್ಯವಾಗಿ, ಈ ಫ್ಯಾನ್ಸ್ ಪಾರ್ಕ್‌ಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಅವಕಾಶ ಕಲ್ಪಿಸಲಾಗಿದ್ದು, ಕುಟುಂಬ ಸಮೇತರಾಗಿ ಬಂದು ಪಂದ್ಯ ವೀಕ್ಷಿಸಲು ಆಯೋಜಕರು ಆಹ್ವಾನ ನೀಡಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA), ಶಿವಮೊಗ್ಗ ಘಟಕ ಹಾಗೂ ಟಾಟಾ ಐಪಿಎಲ್ ಸಹಯೋಗದಲ್ಲಿ ಈ ಫ್ಯಾನ್ಸ್ ಪಾರ್ಕ್ ಆಯೋಜಿಸಲಾಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಪಂಡಿತ್ ಕೂಡ ಉಪಸ್ಥಿತರಿದ್ದರು.