Home Advertisement
Home ಸಿನಿ ಮಿಲ್ಸ್ ನಟ ದಿಲೀಪ್ ರಾಜ್ ಅಕಾಲಿಕ ನಿಧನ: ಸ್ಮಾರ್ಟ್ ವಾಚ್ ಮೇಲೆ ಅತಿಯಾದ ನಂಬಿಕೆ ಚಿಕಿತ್ಸೆಗೆ ಅಡ್ಡಿಯಾಯಿತೇ?

ನಟ ದಿಲೀಪ್ ರಾಜ್ ಅಕಾಲಿಕ ನಿಧನ: ಸ್ಮಾರ್ಟ್ ವಾಚ್ ಮೇಲೆ ಅತಿಯಾದ ನಂಬಿಕೆ ಚಿಕಿತ್ಸೆಗೆ ಅಡ್ಡಿಯಾಯಿತೇ?

0
81

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (47) ಬುಧವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೂ ಚಿಕಿತ್ಸೆ ಫಲಕಾರಿಯಾಗದೆ ನಟ ಕೊನೆಯುಸಿರೆಳೆದಿದ್ದಾರೆ. ಆದ್ರೆ ನಿರ್ಮಾಪಕನ ಸಾವಿನ ಕೊನೆಯ ಕ್ಷಣಗಳ ಕುರಿತು ಹೊರಬಿದ್ದಿರುವ ಮಾಹಿತಿಯೊಂದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸುದ್ದಿಯ ಪ್ರಕಾರ, ದಿಲೀಪ್ ರಾಜ್‌ಗೆ ಎದೆಯಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಾಗ, ತಕ್ಷಣ ವೈದ್ಯರ ಬಳಿ ಹೋಗುವ ಬದಲು ತಮ್ಮ ಸ್ಮಾರ್ಟ್ ವಾಚ್ ಮೂಲಕ ಹೃದಯ ಬಡಿತವನ್ನು ಪರೀಕ್ಷಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ರೋಗಲಕ್ಷಣಗಳು ಕಾಣಿಸಿಕೊಂಡರೂ ವೈದ್ಯಕೀಯ ಸಹಾಯ ಪಡೆಯಲು ವಿಳಂಬ ಮಾಡಿದ್ದೇ ಸಾವಿಗೆ ಪ್ರಮುಖ ಕಾರಣವಾಗಿರಬಹುದು ಎಂದು ಮೂಲಗಳು ಸಂಶಯ ವ್ಯಕ್ತಪಡಿಸತ್ತಿವೆ. “ವೈದ್ಯರನ್ನು ಭೇಟಿ ಮಾಡುವುದನ್ನು ಬಿಟ್ಟು ಉಳಿದೆಲ್ಲ ಪ್ರಯತ್ನಗಳನ್ನು ಮಾಡಿದರು,” ಎಂದು ನಟ ದಿಲೀಪ್ ಸಹೋದ್ಯೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದರು. ಈ ಘಟನೆಯು ತುರ್ತು ಸಂದರ್ಭಗಳಲ್ಲಿ ಕೇವಲ ತಂತ್ರಜ್ಞಾನದ ಮೇಲೆ ಅವಲಂಬಿತರಾಗುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ.

ಸಿನಿಮಾ ಮತ್ತು ಕಿರುತೆರೆ ಪಯಣ: 2007ರಲ್ಲಿ ಬಿಡುಗಡೆಯಾದ ‘ಮಿಲನ’ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ನಟಿಸುವ ಮೂಲಕ ದಿಲೀಪ್ ರಾಜ್ ಮನೆಮಾತಾಗಿದ್ದರು. ‘ಬಾಯ್‌ಫ್ರೆಂಡ್’, ‘ಯು-ಟರ್ನ್’ ನಂತಹ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರ ಮಾಡಿದ್ದ ದಿಲೀಪ್, ಕಿರುತೆರೆಯಲ್ಲಿಯೂ ಅಧಿಪತ್ಯ ಸ್ಥಾಪಿಸಿದ್ದರು. ಹಾಗೇ ಜೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಾಯಕನ ಪಾತ್ರದಿಂದ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

ನಟನೆಯಷ್ಟೇ ಅಲ್ಲದೆ ‘ಡಿಆರ್ ಕ್ರಿಯೇಷನ್ಸ್’ ಮೂಲಕ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ನಟ, ಪ್ರಸಿದ್ಧ ಡಬ್ಬಿಂಗ್ ಕಲಾವಿದರೂ ಆಗಿದ್ದರು. ರಂಗಭೂಮಿಯಿಂದ ವೃತ್ತಿಜೀವನ ಆರಂಭಿಸಿದ್ದ ದಿಲೀಪ್, ನಟರಂಗದಂತಹ ತಂಡಗಳಲ್ಲಿ ಸಕ್ರಿಯರಾಗಿದ್ದರು. ಖ್ಯಾತಿ ʻಹಿಟ್ಲರ್‌ʼ ನಿಧನಕ್ಕೆ ಚಂದನವನದ ಗಣ್ಯರು ಮತ್ತು ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಸ್ಮಾರ್ಟ್‌ ವಾಚ್‌ಗಳು ಕೇವಲ ಮಾಹಿತಿ ನೀಡುವ ಸಾಧನಗಳೇ ಹೊರತು ಅವು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ ಎಂಬುದು ಈ ದುರ್ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.