ರಾಯಪುರ: ಭುವನೇಶ್ವರ ಕುಮಾರ ಮಾರಕ ದಾಳಿಯ ಮಧ್ಯೆಯೂ ತಿಲಕ್ ವರ್ಮಾ ಮತ್ತು ನಮನ್ ಧೀರ್ ಅವರ ಆಸರೆಯಿಂದಾಗಿ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸವಾಲಿನ ಮೊತ್ತವನ್ನು ಕಲೆ ಹಾಕಿದೆ.
ನಿಗದಿತ 20 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ 7 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದೆ. ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೆಕ್ಕಾಚಾರದಂತೆ ಆರಂಭದಲ್ಲಿಯೇ ಮುಂಬೈ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಇನ್ನಿಂಗ್ಸ್ ಆರಂಭದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿಯೇ ರಯಾನ್ ರಿಕೆಲ್ಟನ್ ಅವರನ್ನು ಭುವನೇಶ್ವರ ಕುಮಾರ ಹೊರಗಟ್ಟಿದರು.
ಈ ವೇಳೆ ಬಿರುಸಿನ ಆಟಕ್ಕೆ ಮುಂದಾದ ರೋಹಿತ್ ಶರ್ಮಾ 10 ಎಸೆತದಲ್ಲಿ 22 ರನ್ ಸಿಡಿಸಿ ಆರ್ಭಟಿಸುತ್ತಿರುವಾಗ ಭುವನೇಶ್ವರ ಕುಮಾರ ಅವರ ಎಸೆತದಲ್ಲಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿ ಔಟಾದರು.
ನಾಯಕ ಸೂರ್ಯಕುಮಾರ ಯಾದವ್ ಖಾತೆ ತೆರೆಯದೆ ಮೊದಲ ಎಸೆತದಲ್ಲಿಯೇ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಹೊರನಡೆದರು. ಎರಡು ಓವರ್‌ಗಳಲ್ಲಿಯೇ ಭುವನೇಶ್ವರ ಕುಮಾರ ಮುಂಬೈನ ಪ್ರಮುಖ ಮೂರು ವಿಕೆಟ್ ಉರುಳಿಸಿದರು.
4ನೇ ವಿಕೆಟ್‌ಗೆ ತಿಲಕ್ ವರ್ಮಾ ಮತ್ತು ನಮನ್ ಧೀರ್ 82 ರನ್‌ಗಳ ಜತೆಯಾಟ ನಡೆಸಿ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಪಾರು ಮಾಡಿದರು. ಈ ವೇಳೆ ಅರ್ಧಶತಕದ ಹೊಸ್ತಿಲಲ್ಲಿದ್ದ ನಮನ್‌ಗೆ ರಸಿಕ್ ದಾರ್ ಪೆವಿಲಿಯನ್ ತೋರಿಸಿದರು.
ತಿಲಕ್ ವರ್ಮಾ 42 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನಿಂದ 57 ರನ್‌ಗಳಿಸಿ 18ನೇ ಓವರ್‌ನ ಕೊನೆಯ ಎಸೆತದಲ್ಲಿ ಭುವನೇಶ್ವರ ಎಸೆತದಲ್ಲಿ ಕಟ್ ಆಂಡ್ ಬೋಲ್ಡ್ ಆಗಿ ನಿರ್ಗಮಿಸಿದರು.
ಆರ್‌ಸಿಬಿ ಪರ ಭುವನೇಶ್ವರ ಕುಮಾರ್ 23ಕ್ಕೆ 4 ವಿಕೆಟ್ ಪಡೆದರೆ, ರೊಮಾರಿಯೋ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್, ರಸಿಕ್ ಸಲಾಮ್ ದಾರ್ ತಲಾ ಒಂದು ವಿಕೆಟ್ ಪಡೆದರು.























