ಕೃಷಿಕ ಕುಟುಂಬದ ಯುವಕನಿಗೆ ದೇಶದ ಪ್ರಥಮ ರ‍್ಯಾಂಕ್: ಅಥಣಿಯ ಬಸವರಾಜ ಸಾಧನೆಗೆ ಅಭಿನಂದನೆಗಳ ಮಹಾಪೂರ
ಬೆಳಗಾವಿ: ಬಸವರಾಜ ಕೆಂಪವಾಡ ಅವರು ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ 2025ನೇ ಸಾಲಿನ ಭಾರತೀಯ ಅರಣ್ಯ ಸೇವೆ (Indian Forest Service – IFoS) ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ (AIR-1) ಗಳಿಸಿ ರಾಜ್ಯಕ್ಕೆ ಹಾಗೂ ಉತ್ತರ ಕರ್ನಾಟಕಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಬಸವರಾಜ ಅವರ ಸಾಧನೆ ಈಗ ರಾಜ್ಯದಾದ್ಯಂತ ಸಂತಸ ಮೂಡಿಸಿದೆ.
ಗ್ರಾಮೀಣ ವಿದ್ಯಾರ್ಥಿ :ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಯಾಗಿರುವ ಬಸವರಾಜ ಅವರು ಸವದಿಯ ಖಾಸಗಿ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದರು. ನಂತರ ರಾಯಬಾಗ ತಾಲೂಕಿನ ಅಳಗವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಓದಿದರು.
ಮುಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಯಲ್ಲಟ್ಟಿಯಲ್ಲಿ ಪಿಯುಸಿ ಪೂರ್ಣಗೊಳಿಸಿದ ಅವರು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಿ.ಎಸ್ಸಿ (ಅರಣ್ಯ) ಪದವಿ ಪಡೆದರು. ಬಳಿಕ ಬೆಂಗಳೂರಿನಲ್ಲಿ ನೆಲೆಸಿ ಸ್ವಯಂ ಅಧ್ಯಯನದ ಮೂಲಕ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದರು.
ರೈತ ಕುಟುಂಬದ ಹೆಮ್ಮೆಯ ಪುತ್ರ : ಬಸವರಾಜ ಅವರ ಕುಟುಂಬ ಕೃಷಿಯನ್ನೇ ಜೀವನಾಧಾರವಾಗಿಟ್ಟುಕೊಂಡಿದೆ. ಕುಟುಂಬದ ಬಳಿ ಸುಮಾರು ಮೂರುವರೆ ಎಕರೆ ಜಮೀನು ಇದ್ದು, ಸರಳ ಜೀವನ ನಡೆಸುತ್ತಿರುವ ಕುಟುಂಬದಲ್ಲಿ ಇದೀಗ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಛಲದಂಕ ಮಲ್ಲ: ಬಸವರಾಜ ಅವರ ಹಿರಿಯ ಸಹೋದರ ಹಾಗೂ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಸಿದ್ದು ಕೆಂಪವಾಡ, “ಕಳೆದ ಬಾರಿ ಬಸವರಾಜ ಐಎಫ್‌ಎಸ್ ಪೂರ್ವಭಾವಿ ಪರೀಕ್ಷೆಯಲ್ಲೇ ಉತ್ತೀರ್ಣರಾಗಿರಲಿಲ್ಲ. ಆದರೆ ಛಲ ಬಿಡದೆ ನಿರಂತರವಾಗಿ ಅಧ್ಯಯನ ಮಾಡಿ ಇದೀಗ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಪ್ರಯತ್ನಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತಮ್ಮ ಸಾಧನೆಯ ಮೂಲಕ ತೋರಿಸಿದ್ದಾರೆ,” ಎಂದು ಸಂತಸ ವ್ಯಕ್ತಪಡಿಸಿದರು.
‘ಗ್ರಾಮೀಣ ವಿದ್ಯಾರ್ಥಿಯೂ ಸಾಧಿಸಬಹುದು’ : ತಮ್ಮ ಸಾಧನೆ ಕುರಿತು ಮಾತನಾಡಿದ ಬಸವರಾಜ ಕೆಂಪವಾಡ, “ಸತತ ಪ್ರಯತ್ನ ಮತ್ತು ಶ್ರಮದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಲಿತ ರೈತನ ಮಗನಾದ ನಾನು ಈ ಹಂತಕ್ಕೆ ತಲುಪಿರುವುದು ನನಗೆ ಅಪಾರ ಹೆಮ್ಮೆ ತಂದಿದೆ,” ಎಂದು ಹೇಳಿದರು.
ಕೋಚಿಂಗ್ ಇಲ್ಲದೆ ಐಎಫ್‌ಎಸ್ ಟಾಪರ್: “ಯಾವುದೇ ವಿಶೇಷ ಕೋಚಿಂಗ್ ಅಥವಾ ತರಬೇತಿ ಕೇಂದ್ರಗಳ ಮೊರೆ ಹೋಗದೆ ಹಿರಿಯರ ಮಾರ್ಗದರ್ಶನದೊಂದಿಗೆ ಓದಿದ್ದೇನೆ. ಸದ್ಯ ಬೆಂಗಳೂರಿನಲ್ಲಿ ಇದ್ದು, ಇನ್ನೆರಡು–ಮೂರು ದಿನಗಳಲ್ಲಿ ಸ್ವಗ್ರಾಮಕ್ಕೆ ಬರುತ್ತೇನೆ,” ಎಂದೂ ಅವರು ತಿಳಿಸಿದ್ದಾರೆ.
ಪ್ರಲ್ಹಾದ ಜೋಶಿಯಿಂದ ಅಭಿನಂದನೆ : ಈ ಸಾಧನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಸಂದೇಶದಲ್ಲಿ, “ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2025ರ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆಗೈದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡದ ಹಳೆಯ ವಿದ್ಯಾರ್ಥಿ ಬಸವರಾಜ ಕೆಂಪವಾಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು,” ಎಂದು ತಿಳಿಸಿದ್ದಾರೆ.
“ಕಠಿಣ ಪರಿಶ್ರಮ, ಅಚಲ ಶ್ರದ್ಧೆ ಮತ್ತು ನಿರಂತರ ಪ್ರಯತ್ನದ ಮೂಲಕ ರಾಷ್ಟ್ರಮಟ್ಟದಲ್ಲಿ ನಾಡಿನ ಕೀರ್ತಿಯನ್ನು ಹೆಚ್ಚಿಸಿರುವ ಬಸವರಾಜ ಅವರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಸಂಪತ್ತಿನ ವೃದ್ಧಿಯಲ್ಲಿ ಅವರ ಮುಂದಿನ ಸೇವಾವಧಿ ಯಶಸ್ವಿಯಾಗಲಿ,” ಎಂದು ಹಾರೈಸಿದ್ದಾರೆ.
ಯುವಕರಿಗೆ ಪ್ರೇರಣೆಯಾದ ಸಾಧನೆ : ಗ್ರಾಮೀಣ ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ, ಯಾವುದೇ ದೊಡ್ಡ ಕೋಚಿಂಗ್ ಸಂಸ್ಥೆಗಳ ನೆರವಿಲ್ಲದೆ ದೇಶದ ಅಗ್ರ ಸ್ಥಾನ ಪಡೆಯುವ ಮೂಲಕ ಬಸವರಾಜ ಕೆಂಪವಾಡ ಅನೇಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಅವರ ಯಶೋಗಾಥೆ ಇದೀಗ ಉತ್ತರ ಕರ್ನಾಟಕದ ಯುವಜನತೆಗೆ ಹೊಸ ಆತ್ಮವಿಶ್ವಾಸ ತುಂಬಿದೆ.























