ಕೇಪ್ ವರ್ಡೆ/ಮ್ಯಾಡ್ರಿಡ್: ಪಶ್ಚಿಮ ಆಫ್ರಿಕಾದ ಕೇಪ್ ವರ್ಡೆ ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸಿಲುಕಿಕೊಂಡಿದ್ದ ಐಷಾರಾಮಿ ಕ್ರೂಸ್ ಹಡಗು ‘ಎಂವಿ ಹೊಂಡಿಯಸ್’ (MV Hondius) ಕೊನೆಗೂ ಸ್ಪೇನ್ ಕಡೆಗೆ ಪ್ರಯಾಣ ಆರಂಭಿಸಿದೆ. ಹಂಟಾವೈರಸ್ ಸೋಂಕಿನ ಆತಂಕದ ನಡುವೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಲ್ಲಿ ಸೋಂಕು ಪತ್ತೆಯಾಗಿರುವುದು ಜಾಗತಿಕ ಆರೋಗ್ಯ ವಲಯದಲ್ಲಿ ಚಿಂತೆ ಮೂಡಿಸಿದೆ.
ಸುಮಾರು 150 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತಿದ್ದ ಈ ಹಡಗು ಮೇ 3ರಿಂದ ಕೇಪ್ ವರ್ಡೆ ಸಮುದ್ರ ಪ್ರದೇಶದಲ್ಲಿ ನಿಂತಿತ್ತು. ಮೇ 6ರಂದು ಹಡಗು ಸ್ಪೇನ್‌ನ ಟೆನೆರೈಫ್ ಕಡೆಗೆ ಹೊರಟಿದ್ದು, ಮುಂದಿನ ಮೂರು ದಿನಗಳಲ್ಲಿ ಅಲ್ಲಿಗೆ ತಲುಪುವ ನಿರೀಕ್ಷೆಯಿದೆ ಎಂದು ಸ್ಪೇನ್ ಆರೋಗ್ಯ ಸಚಿವೆ ಮೋನಿಕಾ ಗಾರ್ಸಿಯಾ ತಿಳಿಸಿದ್ದಾರೆ.
ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರನ್ನು ಈಗಾಗಲೇ ತುರ್ತು ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದ ಅಧಿಕಾರಿಗಳು ಹಡಗಿನಲ್ಲಿದ್ದ ಪ್ರಯಾಣಿಕರಲ್ಲಿ ಹಂಟಾವೈರಸ್ ಸೋಂಕು ಪತ್ತೆಯಾದುದಾಗಿ ದೃಢಪಡಿಸಿದ್ದಾರೆ.
ಅರ್ಜೆಂಟೀನಾದಿಂದ ಆರಂಭವಾದ ಈ ಸಮುದ್ರಯಾನ ಅಂಟಾರ್ಕ್ಟಿಕಾ ಹಾಗೂ ದಕ್ಷಿಣ ಅಟ್ಲಾಂಟಿಕ್ ದ್ವೀಪಗಳ ಪ್ರವಾಸವನ್ನು ಒಳಗೊಂಡಿತ್ತು. ಪ್ರವಾಸ ಮುಗಿಸಿ ಹಡಗು ದಕ್ಷಿಣ ಆಫ್ರಿಕಾಕ್ಕೆ ತಲುಪಿದ ನಂತರ ಪ್ರಯಾಣಿಕರ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಅಲ್ಲಿ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ.
ಸ್ವಿಟ್ಸರ್ಲೆಂಡ್‌ನ ಆರೋಗ್ಯ ಅಧಿಕಾರಿಗಳ ಪ್ರಕಾರ, ದಕ್ಷಿಣ ಅಮೆರಿಕದಿಂದ ಬಂದಿದ್ದ ಒಬ್ಬ ಪ್ರಯಾಣಿಕನಲ್ಲಿ ಹಂಟಾವೈರಸ್ ಸೋಂಕು ದೃಢಪಟ್ಟಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಬ್ರಿಟಿಷ್ ಪ್ರಜೆ ದಕ್ಷಿಣ ಆಫ್ರಿಕಾದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ, ಕೇಪ್ ವರ್ಡೆ ಸಮುದ್ರ ಪ್ರದೇಶದಲ್ಲಿದ್ದ ವೇಳೆ ಸೋಂಕಿನ ಪರಿಣಾಮವಾಗಿ ಮೂವರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಆತಂಕ ಹೆಚ್ಚಿಸಿದೆ. ಸೋಂಕಿನ ಶಂಕೆ ಇರುವ ಮೂವರನ್ನು ಹಡಗಿನಿಂದ ಸ್ಥಳಾಂತರಿಸಿ ನೆದರ್ಲೆಂಡ್‌ಗೆ ಕರೆದೊಯ್ಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಆರೋಗ್ಯದ ಮೇಲ್ವಿಚಾರಣೆಗಾಗಿ ಹಡಗಿನ ನಿರ್ವಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು WHO ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯಸಸ್ ತಿಳಿಸಿದ್ದಾರೆ.
ಹಂಟಾವೈರಸ್ ಎಂದರೇನು? : ಹಂಟಾವೈರಸ್ ಎನ್ನುವುದು ಮುಖ್ಯವಾಗಿ ಇಲಿ ಜಾತಿಯ ಪ್ರಾಣಿಗಳಿಂದ ಹರಡುವ ಅಪರೂಪದ ಆದರೆ ಗಂಭೀರ ವೈರಲ್ ಸೋಂಕು. ಸೋಂಕಿತ ಪ್ರಾಣಿಗಳ ಮಲ, ಮೂತ್ರ ಅಥವಾ ಲಾಲೆಯ ಸಂಪರ್ಕದಿಂದ ಮನುಷ್ಯರಿಗೆ ಹರಡಬಹುದು. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೂ ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಈ ಸೋಂಕು ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವೈದ್ಯಕೀಯ ನಿಗಾ ಅತ್ಯಂತ ಮುಖ್ಯವಾಗಿದೆ.























