Home Advertisement
Home ಕ್ರೀಡೆ ಸ್ಮೃತಿ ಮಂಧಾನ ಮಾಜಿ ಗೆಳೆಯನಿಗೆ ಸಂಕಷ್ಟ; ಪಲಾಶ್ ಮುಚ್ಚಲ್ ವಿರುದ್ಧ FIR! ಜೈಲು ಪಾಲಾಗ್ತಾರಾ ಗಾಯಕ?

ಸ್ಮೃತಿ ಮಂಧಾನ ಮಾಜಿ ಗೆಳೆಯನಿಗೆ ಸಂಕಷ್ಟ; ಪಲಾಶ್ ಮುಚ್ಚಲ್ ವಿರುದ್ಧ FIR! ಜೈಲು ಪಾಲಾಗ್ತಾರಾ ಗಾಯಕ?

0
83

ಗಾಯಕ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಇದೀಗ ಗಂಭೀರ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಯಾಂಗ್ಲಿಯ 34 ವರ್ಷದ ವಿಜ್ಞಾನ್ ಮಾನೆ ಎಂಬುವವರು ಪಲಾಶ್ ಮುಚ್ಚಲ್ ವಿರುದ್ಧ ಅಟ್ರಾಸಿಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ದಾಖಲಿಸಿದ್ದು, ಈ ಬೆಳವಣಿಗೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರ ಬಾಲ್ಯದ ಸ್ನೇಹಿತ ಎಂದು ಗುರುತಿಸಿಕೊಂಡಿರುವ ವಿಜ್ಞಾನ್ ಮಾನೆ, ಪಲಾಶ್ ಮುಚ್ಚಲ್ ತಮ್ಮಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ವಿವರದ ಪ್ರಕಾರ, ‘ನಜರಿಯಾ’ ಎಂಬ ಚಲನಚಿತ್ರಕ್ಕಾಗಿ ವಿಜ್ಞಾನ್ ಮಾನೆ ಅವರು ಪಲಾಶ್ ಮುಚ್ಚಲ್ ಅವರಿಗೆ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಈ ಚಿತ್ರದಲ್ಲಿ ತಮಗೆ ಪಾತ್ರ ನೀಡುವುದಾಗಿ ಮತ್ತು ಚಿತ್ರ ಬಿಡುಗಡೆಯಾದ ನಂತರ ಲಾಭದೊಂದಿಗೆ ಹಣವನ್ನು ಹಿಂತಿರುಗಿಸುವುದಾಗಿ ಪಲಾಶ್ ಮುಚ್ಚಲ್ ಭರವಸೆ ನೀಡಿದ್ದರು. ಆದರೆ, ಆರೋಪದ ಪ್ರಕಾರ, ಆ ಚಿತ್ರವೇ ನಿರ್ಮಾಣವಾಗಿಲ್ಲ. ಹಣವನ್ನು ಹಿಂತಿರುಗಿಸುವಂತೆ ಮಾನೆ ಪದೇ ಪದೆ ಮನವಿ ಮಾಡಿಕೊಂಡರೂ, ಪಲಾಶ್ ಮುಚ್ಚಲ್ ದಿನಗಳನ್ನು ಮುಂದೂಡುತ್ತಾ ಬಂದಿದ್ದಾರೆ. ಅಂತಿಮವಾಗಿ ಹಣ ನೀಡಲು ನಿರಾಕರಿಸಿದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ.

ಈ ಘಟನೆ ಕಳೆದ 2025ರ ನವೆಂಬರ್ 22ರಂದು ಸ್ಯಾಂಗ್ಲಿಯ ಫಾರ್ಮ್‌ಹೌಸ್ ಒಂದರಲ್ಲಿ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣದ ವಿಚಾರವಾಗಿ ಮಾತನಾಡಲು ಹೋದಾಗ ಪಲಾಶ್ ಮುಚ್ಚಲ್, ಮಾನೆ ಅವರನ್ನು ಜಾತಿ ನಿಂದನೆ ಮಾಡಿ, ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ನಡುವೆ ನಡೆಯಬೇಕಿದ್ದ ಮದುವೆ ಕಳೆದ ಡಿಸೆಂಬರ್ 2025ರಲ್ಲಿ ರದ್ದಾದ ಕೆಲವು ತಿಂಗಳುಗಳ ನಂತರ ಈ ದೂರು ದಾಖಲಾಗಿದೆ.

ಸದ್ಯ ಸ್ಯಾಂಗ್ಲಿ ಪೊಲೀಸರು ವಿಜ್ಞಾನ್ ಮಾನೆ ಅವರ ದೂರಿನ ಆಧಾರದ ಮೇಲೆ ಪಲಾಶ್ ಮುಚ್ಚಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಡಿವೈಎಸ್ಪಿ ಸಂದೀಪ್ ಭಗವತ್ ಅವರು, ಪ್ರಕರಣ ಅಧಿಕೃತವಾಗಿ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಖಚಿತಪಡಿಸಿದ್ದಾರೆ. ಸಿನಿಮಾ ಹೂಡಿಕೆಯ ಹಣದ ವಿವಾದ ಹಾಗೂ ಜಾತಿ ನಿಂದನೆಯ ಆರೋಪಗಳು ಪಲಾಶ್ ಮುಚ್ಚಲ್ ಅವರ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದ್ದು, ಮುಂದಿನ ತನಿಖೆಯಲ್ಲಿ ಸತ್ಯಾಂಶ ಹೊರಬರಬೇಕಿದೆ.