Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಬಾತುಕೋಳಿ ಹಿಡಿಯಲು ಹೋಗಿ ದುರಂತ: ನಾಲ್ವರು ಮಕ್ಕಳು ನೀರುಪಾಲು

ಬಾತುಕೋಳಿ ಹಿಡಿಯಲು ಹೋಗಿ ದುರಂತ: ನಾಲ್ವರು ಮಕ್ಕಳು ನೀರುಪಾಲು

0
67

ಚಿಕ್ಕಮಗಳೂರಿನ ಅರಳಗುಪ್ಪೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ; ಇನ್ನೊಬ್ಬ ಬಾಲಕನ ಸ್ಥಿತಿ ಗಂಭೀರ

ಚಿಕ್ಕಮಗಳೂರು : ಜಿಲ್ಲೆಯ ಅರಳಗುಪ್ಪೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ.

ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಮಹಾದಿಯಾ, ಅರುನುಸ್, ನಾಯುಸ್ ಹಾಗೂ ಅಬ್ದುಲ್ ರೆಹಮಾನ್ ಮೃತಪಟ್ಟ ಮಕ್ಕಳಾಗಿದ್ದಾರೆ. ಮೃತಪಟ್ಟವರು 5ರಿಂದ 14 ವರ್ಷದೊಳಗಿನವರಾಗಿದ್ದು, ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಕೆರೆಯೊಳಗೆ ಹೋದ ಬಾತುಕೋಳಿಯನ್ನು ಹಿಡಿಯಲು ಮಕ್ಕಳು ನೀರಿಗೆ ಇಳಿದಿದ್ದರು. ಈ ವೇಳೆ ಆಳವಾದ ನೀರಿನಲ್ಲಿ ಸಿಲುಕಿ ಒಬ್ಬರ ಹಿಂದೆ ಒಬ್ಬರು ಮುಳುಗಿದರೆಂದು ಹೇಳಲಾಗಿದೆ. ಅವರ ಜೊತೆಗಿದ್ದ ನಾಲ್ಕು ವರ್ಷದ ಅರ್ಮಾನ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಆಕ್ರಂದನದ ವಾತಾವರಣ ನಿರ್ಮಾಣವಾಗಿದ್ದು, ಆಸ್ಪತ್ರೆ ಮುಂಭಾಗ ಮೃತ ಮಕ್ಕಳ ಪೋಷಕರ ರೋದನ ಹೃದಯ ಕದಿಯುವಂತಿತ್ತು. ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ತನಿಖೆ ಮುಂದುವರಿದಿದೆ. ಈ ದುರ್ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದ್ದು, ಮಕ್ಕಳ ಸುರಕ್ಷತೆ ಕುರಿತು ಮತ್ತೊಮ್ಮೆ ಚಿಂತನೆಗೆ ಕಾರಣವಾಗಿದೆ.