ಚೆನ್ನೈ: ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಕಾರ್ತಿಕ್ ಶರ್ಮಾ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಮುಂಬೈ ನೀಡಿದ್ದ 160 ರನ್‌ಗಳ ಗುರಿಯನ್ನು 11 ಎಸೆತಗಳು ಬಾಕಿ ಇರುವಂತೆಯೇ ಚೆನ್ನೈ ಗೆಲುವಿನ ನಗೆ ಬೀರಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿದ್ದು, ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಮುಂಬೈ ವಿರುದ್ಧ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ (11) ಇಂದು 2 ಓವರ್‌ನ ಕೊನೆಯ ಎಸೆತದಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ರುತುರಾಜ್ ಮತ್ತು ಉರ್ವಿಲ್ ಪಟೇಲ್ (24) ಜೋಡಿ 49 ರನ್ ಜತೆಯಾಟ ನಡೆಸಿತು.
ಇನ್ನೊಂದು ತುದಿಯಲ್ಲಿ ರುತುರಾಜ್ ಗಟ್ಟಿಯಾಗಿ ನಿಂತುಕೊಂಡಿದ್ದರೆ, ಅವರಿಗೆ ಕಾರ್ತಿಕ್ ಶರ್ಮಾ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ರುತುರಾಜ್ ಅಜೇಯ 67 ಹಾಗೂ ಕಾರ್ತಿಕ್ ಅಜೇಯ 54 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಬ್ಯಾಂಟಿಗ್ ಆಯ್ದುಕೊಂಡು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
ಆರಂಭದಲ್ಲಿಯೇ ವಿಲ್ ಜಾಕ್ಸ್ ಕೇವಲ ಒಂದು ರನ್‌ಗಳಿಸಿ ಹೊರ ನಡೆದಿದ್ದು, ಮುಂಬೈ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಈ ವೇಳೆ ರಯಾನ್ ರಿಕೆಲ್ಟನ್ ಮತ್ತು ನಮನ್ ಧೀರ್ ಜೋಡಿ 32 ಎಸೆತದಲ್ಲಿ 58 ರನ್‌ಗಳ ಜತೆಯಾಟ ನಡೆಸಿ ತಂಡದ ರನ್‌ರೇಟ್ ಹೆಚ್ಚಿಸಿದರು.
ರಿಕೆಲ್ಟನ್ 24 ಎಸೆತದಲ್ಲಿ 5 ಸಿಕ್ಸರ್‌ನೊಂದಿಗೆ 37 ರನ್ ಸಿಡಿಸಿ ನೂರ್ ಅಹ್ಮದ್ ಎಸೆತದಲ್ಲಿ ಔಟಾದರು. ಬಳಿಕ ಕ್ರಿಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಕೇವಲ 12 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸರ್‌ನಿಂದ 21 ರನ್ ಚಚ್ಚಿ ಪೆವಿಲಿಯನ್ ಸೇರಿದರು.
10.4 ಓವರ್‌ಗಳಲ್ಲಿ 99 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಮುಂಬೈಗೆ ನಂತರ ಬಂದ ಆಟಗಾರರು ಬಹಳ ಹೊತ್ತು ಕ್ರಿಸ್‌ನಲ್ಲಿ ನಿಲ್ಲದೆ ಹಿಂತಿರುಗಿದ್ದು, ತಂಡದ ಮೊತ್ತ ಕುಸಿಯಲು ಕಾರಣವಾಯಿತು.
ಹಾರ್ದಿಕ್ ಪಾಂಡ್ಯ ಕೂಡ 23 ಎಸತಗಳಿಂದ 18 ರನ್‌ಗಳಿಸಿದ್ದು, ಬಿಟ್ಟರೆ ನಂತರದ ಯಾವೊಬ್ಬ ಆಟಗಾರನೂ ಎರಡಂಕಿಯ ರನ್ ಗಳಿಸಲಿಲ್ಲ. ಅಂತಿಮವಾಗಿ ಮುಂಬೈ 159 ರನ್ ಗಳಿಸಿತು.
ಚೆನ್ನೈ ಪರ ಅನ್ಶುಲ್ ಕಾಂಬೋಜ್ 32ಕ್ಕೆ 3 ವಿಕೆಟ್ ಪಡೆದರೆ, ನೂರ್ ಅಹ್ಮದ್ 26ಕ್ಕೆ 2 ವಿಕೆಟ್ ಪಡೆದರು. ರಾಮಕೃಷ್ಣ ಘೋಷ್ ಜೇಮೀ ಓವರ್ಟನ್ ತಲಾ ಒಂದು ವಿಕೆಟ್ ಪಡೆದರು.























