ಮೈಸೂರು: ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾರ್ಥನೆ ಎಂಬುದು ಬಹಳ ಮುಖ್ಯ. ಅನನ್ಯ ಭಕ್ತಿಯಿಂದ ಪ್ರಾರ್ಥಿಸುವುದೇ ನಮ್ಮ ಘನ ಉದ್ದೇಶವಾಗಲಿ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.
ಶ್ರೀರಾಮಪುರದಲ್ಲಿರುವ ಉತ್ತರಾದಿ ಮಠದ ಶಾಖೆ, ಶ್ರೀವೆಂಕಟೇಶ್ವರ ಧ್ಯಾನ ಕೇಂದ್ರದ 8ನೇ ವಾರ್ಷಿಕೋತ್ಸವದ ಸರಣಿ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಶನಿವಾರ ಬೆಳಗ್ಗೆ ಶ್ರೀ ವೆಂಕಟೇಶ ದೇವರಿಗೆ ಮಹಾ ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ ನೆರವೇರಿಸಿ ಅವರು ಅನುಗ್ರಹ ಸಂದೇಶ ನೀಡಿದರು.
ಎಲ್ಲಿ ಪ್ರೀತಿ ಮತ್ತು ಭಕ್ತಿಯಿಂದ ಆರಾಧನೆ ನಡೆಯುವುದೋ ಅಲ್ಲಿ ದೇವರ ನೆಲೆ ಇರುತ್ತದೆ. ಹಾಗಾಗಿ ಪ್ರಾರ್ಥನೆಯನ್ನು ಮಾಡುವುದು ನಮ್ಮ ಪರಮ ಉದ್ದೇಶವಾಗಲಿ. ಭಕ್ತರ ಪಾಪಗಳನ್ನು ದೇವರು ವರ್ಷಣ ಮಾಡಬೇಕು. ವರ್ಷಧಾರೆಯಂತೆ ನಮ್ಮ ಮೇಲೆ ಆತನ ಕಾರುಣ್ಯವು ಹರಿಯಬೇಕು ಎಂದರು.
ದೇವರನ್ನು ಒಲಿಸಿಕೊಳ್ಳಬೇಕು ಎಂದರೆ ಇಲ್ಲಿ ಹಣ, ಅಂತಸ್ತು, ಶ್ರೀಮಂತಿಕೆ, ಸಮಯ ಮತ್ತು ಜನ ಸಂದಣಿಗಳು ಮಾನದಂಡ ಅಲ್ಲ. ನಿಷ್ಕಲ್ಮಶವಾದ ಪ್ರಾರ್ಥನೆಯೇ ಮಾನದಂಡ. ನಾವು ಮಾಡುವ ಪ್ರತಿಯೊಂದು ಕೆಲಸಗಳೂ ಜ್ಞಾನಿಗಳಿಗೆ, ಪಂಡಿತರಿಗೆ, ಹಿರಿಯರಿಗೆ ಪ್ರೀತಿಯಾದರೆ ಅದು ದೇವರಿಗೂ ಪ್ರಿಯವಾಗುತ್ತದೆ. ಹಾಗೆ ಆದಾಗ ಮಾತ್ರ ಉತ್ತಮ ಫಲಗಳು ನಮಗೆ ದೊರಕಲು ಸಾಧ್ಯ ಎಂದರು.
ಅನುಸಂಧಾನ ಎಂಬುದು ಬಹಳ ಮುಖ್ಯ: ಭಕ್ತಿ ಮಾರ್ಗದಲ್ಲಿ ಅನುಸಂಧಾನ ಎಂಬುದು ಬಹಳ ಮುಖ್ಯ. ಶ್ರೀ ವೆಂಕಟೇಶ ದೇವರು ನಮ್ಮ ಸಂಕಟಗಳನ್ನು ಹರಣ ಮಾಡಲು ಅವತಾರ ಮಾಡಿದ್ದಾನೆ. ಅವನ ಮೇಲೆ ಹೆಚ್ಚಿನ ಭಕ್ತಿ ಮತ್ತು ಶ್ರದ್ಧೆಯನ್ನು ಮಾಡುವುದು ಮಾತ್ರ ನಮ್ಮ ಕೆಲಸವಾಗಬೇಕು. ಆಗ ಬದುಕಿಗೆ ಒಂದು ಅರ್ಥ ಬರುತ್ತದೆ ಎಂದು ಸ್ವಾಮೀಜಿ ಹೇಳಿದರು. ಧರ್ಮ ಕ್ಷೇತ್ರಗಳಲ್ಲಿ ಜ್ಞಾನ ಕಾರ್ಯವು ಹೆಚ್ಚಾಗಿ ನಡೆಯಬೇಕು. ಆಗ ಸನ್ನಿಧಿಯಲ್ಲಿ ದೇವರು ಸನ್ನಿಹಿತ ನಾಗುತ್ತಾನೆ. ಜ್ಞಾನ ಮತ್ತು ಭಕ್ತಿಗಳು ನಮ್ಮಲ್ಲಿ ಜಾಗೃತವಾಗುತ್ತವೆ. ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ ಈ ನಿಟ್ಟಿನಲ್ಲಿ ನಿರಂತರವಾಗಿ ಜ್ಞಾನ ಸತ್ರಗಳನ್ನೇ ಮಾಡುತ್ತಿದೆ. ಪಂಡಿತ ಹೇಮಂತ ಆಚಾರ್ಯರು ಕೇಂದ್ರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಸಾರ್ಥಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಮುಂದಿನ ಪೀಳಿಗೆಯೂ ಸನ್ಮಾರ್ಗದಲ್ಲಿ ನಡೆಯಲಿ: ನಮ್ಮ ಪೂರ್ವಿಕರು ಸಾತ್ವಿಕವಾಗಿ ಸಾರ್ಥಕ ಜೀವನ ಮಾಡಿದ್ದರು. ದೇವರು ಇಂದು ನಮಗೆ ಉತ್ತಮ ಪರಂಪರೆಯನ್ನು, ಸತ್ಸಂಗವನ್ನೂ ನೀಡಿದ್ದಾನೆ. ನಮ್ಮ ಮುಂದಿನ ಪೀಳಿಗೆಯೂ ಸನ್ಮಾರ್ಗದಲ್ಲೇ ನಡೆಯಬೇಕು ಎಂದರೆ ನಾವೆಲ್ಲರೂ ಇಂದು ಹೆಚ್ಚು ಹೆಚ್ಚು ಜಪ, ತಪ, ಪಾರಾಯಣಗಳನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು. ನಂತರ ಶ್ರೀಗಳು ವೆಂಕಟೇಶ ದೇವರಿಗೆ ಫಲ ಪಂಚಾಮೃತ, ಕ್ಷೀರ ಮತ್ತು ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆಸಿ ಮಂಗಳಾರತಿ ಮಾಡಿದರು.
ಶ್ರೀಗಳೇ ಜ್ಞಾನ ಯಜ್ಞವನ್ನು ನೆರವೇರಿಸಿಕೊಡಬೇಕು: ಕೇಂದ್ರದ ವ್ಯವಸ್ಥಾಪಕ, ಪಂಡಿತ ಹೇಮಂತ ಆಚಾರ್ಯ ಗುಡಿ ಮಾತನಾಡಿ, ಶ್ರೀಗಳ ಅನುಗ್ರಹ ಮತ್ತು ಮಾರ್ಗದರ್ಶನದಿಂದಲೇ ಧ್ಯಾನ ಕೇಂದ್ರದಲ್ಲಿ ನಿರಂತರ ಚಟುವಟಿಕೆಗಳು ನಡೆಯುತ್ತಿವೆ. ಅವರು ಕೃಪೆ ಮಾಡಿ 10 ದಿನಗಳ ಕಾಲ ಇಲ್ಲಿಯೇ ಇದ್ದು ಜ್ಞಾನ ಯಜ್ಞವನ್ನು ನೆರವೇರಿಸಿಕೊಡಬೇಕು. ಮೈಸೂರು ನಗರದ ಭಕ್ತ ಗಣವೂ ಇದನ್ನೇ ಅಪೇಕ್ಷೆ ಮಾಡುತ್ತಿದೆ ಎಂದರು. ವಿದ್ವಾಂಸರಾದ ಬಾದರಾಯಣಾಚಾರ್ಯ, ಅನಿರುದ್ಧಾಚಾರ್ಯ, ಹರೀಶ ಆಚಾರ್ಯ ಮತ್ತು ಧ್ಯಾನ ಕೇಂದ್ರದ ಕಾರ್ಯಕರ್ತರು ಇದ್ದರು. ನೂರಾರು ಭಕ್ತರು ಶ್ರೀಗಳಿಗೆ ಪಾದಪೂಜೆ ಮಾಡಿ ಮುದ್ರಾ ಧಾರಣೆ ಮಾಡಿಸಿಕೊಂಡರು.























