Home Advertisement
Home ನಮ್ಮ ಜಿಲ್ಲೆ ಧಾರವಾಡ ಹವಳ ಮುತ್ತು ಉದುರುತ್ತಾವ್ರೀಪ್ಪೋ: ಕಾರ್ಣಿಕದ ನುಡಿ

ಹವಳ ಮುತ್ತು ಉದುರುತ್ತಾವ್ರೀಪ್ಪೋ: ಕಾರ್ಣಿಕದ ನುಡಿ

0
204

ಧಾರವಾಡ (ಉಪ್ಪಿನಬೆಟಗೇರಿ): ‘ಗುಡುಗು ಮಿಂಚು ಬಾಳೈತ್ರಿಪ್ಪೋ, ಮಳಿ ಬೆಳಿ ಸಂಪೈತ್ರಿಪ್ಪೋ, ಹವಳಾ ಮುತ್ತು ಉದುರುತ್ತಾವ್ರೀಪ್ಪೋ, ಮನಿ ಮನಿಯೊಳಗ ಜಗಳ ಅಕ್ಕಾವ್ರಿಪ್ಪೋ, ರೈತರು ಎಲ್ಲಾರೂ ಕೂಡಿ ಚೆಂದಾಗಿ ಜಾತ್ರಿ ಮಾಡ್ರಿಪ್ಪೋ.’ ಇದು ಧಾರವಾಡ ತಾಲೂಕಿನ ಮರೇವಾಡ ಗ್ರಾಮದಲ್ಲಿ ಶುಕ್ರವಾರ ಜರುಗಿದ ಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಣಿಕದ ನುಡಿ.

ಸಾಯಂಕಾಲ ಸಕಲ ಸದ್ಭಕ್ತರ ಜಯಘೋಷಗಳ ಮಧ್ಯೆ ಜರುಗಿದ ರಥೋತ್ಸವದ ಕೊನೆಗೆ ರಥದಲ್ಲಿ ಕುಳಿತಿದ್ದ ಅಮ್ಮಿನಬಾವಿ ಬಸವಣ್ಣ ದೇವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ವರ್ಷದ ಆಗು ಹೋಗುಗಳ ಕುರಿತು ಕಾರ್ಣಿಕ ನುಡಿದರು.

ಅಮ್ಮಿನಬಾವಿ ಬಸವಣ್ಣ (ನಂದೀಶ್ವರ) ದೇವರ ಪಾಲ್ಕಿ ನಂದಿಕೋಲುಗಳು ಬರುತ್ತಿದ್ದಂತೆ ಅಲಂಕೃತ ರಥಕ್ಕೆ ವೈದಿಕರುಗಳಾದ ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಶೇಖರಯ್ಯ ಹಿರೇಮಠ ಹಾಗೂ ಅಂಕಲಯ್ಯ ಯರಗಂಬಳಿಮಠ ಪೂಜೆ ಸಲ್ಲಿಸಿದರು.

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿ೦ಗ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳ ಭಕ್ತರು ಸೇರಿದಂತೆ ಸಹಸ್ರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ರಥೋತ್ಸವ ಜರುಗಿತು.

ವಿಶೇಷ ಪೂಜೆ: ಜಾತ್ರೆಯ ಅಂಗವಾಗಿ ಶುಕ್ರವಾರ ಪ್ರಾತಃಕಾಲ ಬಸವಣ್ಣ(ನಂದೀಶ್ವರ) ದೇವರ ಶಿಲಾ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಮತ್ತು ಪುಷ್ಪಾಲಂಕಾರದ ವಿಶೇಷ ಪೂಜೆ ನಡೆಯಿತು. ನಂತರ ನಡೆದ ದಾಸೋಹ ಸೇವೆಯಲ್ಲಿ ನಿರಂತರ ಅನ್ನಸಂತರ್ಪಣೆ ಜರುಗಿತು.