ಹುಬ್ಬಳ್ಳಿ: ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಮಹಿಳೆಯರ ಬಗ್ಗೆ ಗೌರವ ಇಲ್ಲವೆಂಬುದು ಗೊತ್ತಾಗಿದೆ. ಈ ದೇಶದ ತಾಯಂದಿರು ಮತ್ತು ಸಹೋದರಿಯರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರು ನಾರಿ ಶಕ್ತಿ ಅಧಿನಿಯಮ ಜಾರಿಗೊಳಿಸಲು ದೃಢನಿರ್ಧಾರ ಮಾಡಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಲೋಕಸಭೆಯಲ್ಲಿ ಮಸೂದೆ ಅನುಮೋದನೆ ಪಡೆಯದಂತೆ ಷಡ್ಯಂತ್ರ ಮಾಡಿ ಮಸೂದೆ ಅನುಮೋದನೆ ಪಡೆಯದಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ನಾರಿ ಶಕ್ತಿಗೆ ಹೆಚ್ಚಿನ ಗೌರವ ಸಿಗಬೇಕು. ಲೋಕಸಭೆ, ವಿಧಾನಸಭೆಯಲ್ಲಿ ಶೇ 33 ಮೀಸಲಾತಿ ಮೂಲಕ ಅವರನ್ನು ಸಮಾಜದ ಮುಂಚೂಣಿಯಲ್ಲಿ ತರಲು ಪ್ರಧಾನಮಂತ್ರಿಯವರು ಬಯಸಿದ್ದರು. ಇದನ್ನು ಸಹಿಸಲು ಕಾಂಗ್ರೆಸ್ಸಿನವರಿಗೆ ಆಗುತ್ತಿಲ್ಲ. ಏನೇ ಷಡ್ಯಂತ್ರ ಮಾಡಿದರೂ ಅತಿ ಶೀಘ್ರದಲ್ಲೇ ಮುಂದೊಂದು ದಿನ ಮತ್ತೊಮ್ಮೆ ಮಸೂದೆಯನ್ನು ಅನುಮೋದನೆ ಆಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿನ ಉದ್ಧಟತನವನ್ನು ಧಿಕ್ಕರಿಸಿ, ಆ ಪಕ್ಷದ ಬಂಡವಾಳ ಬಯಲು ಮಾಡುವ ನಿಟ್ಟನಲ್ಲಿ ಬಿಜೆಪಿ ಹುಬ್ಬಳ್ಳಿಯಲ್ಲಿ ಮಹಿಳೆಯರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದೆ. ಮುಂದಿನ ಹೋರಾಟದ ಕುರಿತು ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.





















