ಜಿ.ಬಿ.ರುದ್ರಗಂಟಿ
ನಾಲತವಾಡ( ವಿಜಯಪುರ): ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬಿಸಿಲಿನಲ್ಲಿ ಆಟವಾಡಿದ 8ನೇ ತರಗತಿ ಬಾಲಕನೊಬ್ಬ ತೀವ್ರ ಶಾಖಕ್ಕೆ ತುತ್ತಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಮಂಗಳವಾರ ಹೋಬಳಿ ವ್ಯಾಪ್ತಿಯ ಇಂಗಳಗಿ ಗ್ರಾಮದಲ್ಲಿ ನಡೆದಿದೆ.
ಇಂಗಳಗಿ ಗ್ರಾಮದ ಶ್ರೀಶೈಲ ಬಸವಂತಪ್ಪ ಬಿರಾದಾರ (15) ಮೃತ ಬಾಲಕ. ಇಂಗಳಗಿ-ಟಕ್ಕಳಕಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ.
ವಿದ್ಯಾರ್ಥಿ ಶ್ರೀಶೈಲ ಖೋಖೋ, ಕಬಡ್ಡಿ ಕ್ರೀಡೆಗಳಲ್ಲಿ ಚುರುಕಾಗಿದ್ದ ಅಲ್ಲದೇ ಹೋಬಳಿ ಮತ್ತು ತಾಲೂಕು ಮಟ್ಟದ ಕಬಡ್ಡಿಯಲ್ಲಿ ಉತ್ತಮ ಆಟ ಗಾರನಾಗಿ ಹೊರಹೊಮ್ಮಿದ್ದ.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬಿಸಿಲಿ ನಲ್ಲಿ ಆಟವಾಡಿದ್ದರಿಂದ ಅನಾರೋಗ್ಯಕ್ಕೀಡಾಗಿದ್ದ ಅತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪಾಲಕರು ಮಕ್ಕಳನ್ನು ಬೇಸಿಗೆ ರಜೆಯ ಸಮಯದಲ್ಲಿ ಬಿಸಿಲಿನಲ್ಲಿ ಆಟವಾಡಲು ಕಳಿಸದೇ ಸಾಧ್ಯವಾದಷ್ಟು ಒಳಾಂಗಣದಲ್ಲಿ ಆಡುವ ಆಟಗಳಲ್ಲಿ ತೊಡಗಿಸಲು ಒತ್ತು ನೀಡಬೇಕು.ಮೇಲಿಂದ ಮೇಲೆ ನೀರು ಕುಡಿಯಬೇಕು.ಮಜ್ಜಿಗೆ,ಪಾನಕ,ತಂಪಾದ ದ್ರವ ಆಹಾರ ಸೇವನೆ ಮಾಡಬೇಕು ಎಂದು ಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ ತಿಳಿಸಿದ್ದಾರೆ.























