Home Advertisement
Home ನಮ್ಮ ಜಿಲ್ಲೆ ಮಂಡ್ಯ ಬಿಸಿಲಿನ ತಾಪಕ್ಕೆ ಪರಿಹಾರ: ಪ್ರಾಣಿ-ಪಕ್ಷಿಗಳಿಗೆ ನೀರಿನ ಹೊಂಡ ವ್ಯವಸ್ಥೆ

ಬಿಸಿಲಿನ ತಾಪಕ್ಕೆ ಪರಿಹಾರ: ಪ್ರಾಣಿ-ಪಕ್ಷಿಗಳಿಗೆ ನೀರಿನ ಹೊಂಡ ವ್ಯವಸ್ಥೆ

0
55

ಮಂಡ್ಯ: ರಾಜ್ಯಾದ್ಯಂತ ತಾಪಮಾನ ಏರಿಕೆಯಿಂದ ಮಾನವರಷ್ಟೇ ಅಲ್ಲ, ಮೂಕ ಪ್ರಾಣಿ-ಪಕ್ಷಿಗಳೂ ತತ್ತರಿಸುತ್ತಿರುವ ಹಿನ್ನೆಲೆ, ಜೈ ಕರ್ನಾಟಕ ಪರಿಷತ್ತು ವತಿಯಿಂದ ಮಾನವೀಯ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಗರದ ವಿವಿಧ ಉದ್ಯಾನವನಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಹೊಂಡಗಳನ್ನು ಇಡುವ ಮೂಲಕ ಬಿರುಬೇಸಿಗೆಯಲ್ಲಿ ಜೀವಜಗತ್ತಿಗೆ ನೆರವಾಗುವ ಅಭಿಯಾನ ಆರಂಭಿಸಲಾಗಿದೆ.

ನಗರದ ಪರಮ ಪೂಜ್ಯ ಶಿವಕುಮಾರ ಮಹಾ ಸ್ವಾಮೀಜಿ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಉದ್ಯಾನವನದ ವಿವಿಧ ಸ್ಥಳಗಳಲ್ಲಿ ನೀರಿನ ಪಾತ್ರೆಗಳನ್ನು ಇರಿಸಿ, ಪಕ್ಷಿಗಳು ಹಾಗೂ ಸಣ್ಣ ಪ್ರಾಣಿಗಳಿಗೆ ಸುಲಭವಾಗಿ ನೀರು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

ಮಾನವೀಯತೆಯ ಸಂದೇಶ : ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಬೇಸಿಗೆಯ ಈ ಕಠಿಣ ಸಂದರ್ಭದಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಪರಿಸರ ಮತ್ತು ಜೀವಜಗತ್ತಿನ ಸಮತೋಲನ ಕಾಪಾಡಲು ಇಂತಹ ಕಾರ್ಯಗಳು ಅಗತ್ಯವೆಂದರು.

ಸೇವೆಗೆ ಶ್ಲಾಘನೆ : ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ. ಶಿವಕುಮಾರ್ ಅವರು, ಜೈ ಕರ್ನಾಟಕ ಪರಿಷತ್ತಿನ ಈ ಸೇವೆಯನ್ನು ಶ್ಲಾಘಿಸಿ, ಬಿರುಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಮಾನವೀಯತೆಯ ಪ್ರತೀಕ ಎಂದು ಹೇಳಿದರು.

ಈ ಅಭಿಯಾನದಲ್ಲಿ ಜೈ ಕರ್ನಾಟಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಸ್. ನಾರಾಯಣ್, ಉಪಾಧ್ಯಕ್ಷ ಜೆ. ಬಸವರಾಜ್, ನುಡಿಭಾರತಿ ಬಸವೇಗೌಡರು, ಎಲ್ಲರೊಳಗೊಂದಾಗು ಸಂಸ್ಥೆಯ ವಿನಯ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. ಜೊತೆಗೆ ವಿವಿಧ ಶಾಖಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.