ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳು 2027ಕ್ಕಾಗಿ ನಾಮನಿರ್ದೇಶನ ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ, ಅರ್ಜಿಗಳನ್ನು ಮಾರ್ಚ್ 15, 2026ರಿಂದ ಸ್ವೀಕರಿಸಲಾಗುತ್ತಿದೆ.
ಈ ಪ್ರಶಸ್ತಿಗಳು ಪದ್ಮ ಪ್ರಶಸ್ತಿ (ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ) ಒಳಗೊಂಡಿದ್ದು, ಕಲೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಆನ್‌ಲೈನ್ ಮೂಲಕವೇ ಅರ್ಜಿ : ನಾಮನಿರ್ದೇಶನಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯು ಮಾರ್ಚ್ 15, 2026 ರಿಂದ ಪ್ರಾರಂಭವಾಗಿದ್ದು, ಜುಲೈ 31, 2026 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು ಅಥವಾ ನಾಗರಿಕರು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (awards.gov.in) ಮೂಲಕ ಮಾತ್ರ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು (Padma Awards) ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. 1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಗಳನ್ನು ಕಲೆ, ಸಮಾಜ ಸೇವೆ, ವಿಜ್ಞಾನ, ಕ್ರೀಡೆ ಮತ್ತು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ
ಯಾರು ನಾಮನಿರ್ದೇಶನ ಮಾಡಬಹುದು? : ಯಾವುದೇ ವ್ಯಕ್ತಿ ತನ್ನನ್ನೇ ಅಥವಾ ಇತರರನ್ನು ನಾಮನಿರ್ದೇಶನ ಮಾಡಬಹುದು, ಸಮಾಜದ ಎಲ್ಲ ವರ್ಗಗಳಿಂದ ಅರ್ಜಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಕಲೆ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ನಾಗರಿಕ ಸೇವೆ ಹಾಗೂ ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರಬೇಕು. ಪ್ರಶಸ್ತಿ ನೀಡುವಾಗ ವ್ಯಕ್ತಿಯ ಸಾಧನೆಯಲ್ಲಿ ಸಾರ್ವಜನಿಕ ಸೇವೆಯ ಅಂಶವಿದೆಯೇ ಎಂದು ಪರಿಗಣಿಸಲಾಗುತ್ತದೆ
ಪ್ರತಿ ವರ್ಷ ಜನವರಿ 25ರಂದು (ಗಣರಾಜ್ಯೋತ್ಸವದ ಮುನ್ನಾದಿನ) ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.





















