ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಗಾಯದ ನಡುವೆಯೂ ಬ್ಯಾಟಿಂಗ್ ಮಾಡಿದ ರೀತಿ ಮತ್ತು ಅದನ್ನು ತಂಡ ನಿಭಾಯಿಸಿದ ರೀತಿಗೆ ಭಾರತದ ಹಿರಿಯ ಆಟಗಾರ ಆರ್ ಅಶ್ವಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ 18 ವರ್ಷದ ಆಯುಷ್ ಮ್ಹಾತ್ರೆ, ಮೊಣಕಾಲಿಗೆ ಭಾರವಾದ ಪಟ್ಟಿ (Knee Brace) ಧರಿಸಿ ಬ್ಯಾಟಿಂಗ್‌ಗೆ ಬಂದಿದ್ದರು. ಪಂದ್ಯದ ವೇಳೆ ವಿಕೆಟ್‌ಗಳ ನಡುವೆ ಓಡಲು ಪರದಾಡುತ್ತಾ ತೀವ್ರವಾಗಿ ಕುಂಟುತ್ತಿದ್ದರು. ನಾಯಕ ರುತುರಾಜ್ ಗಾಯಕ್ವಾಡ್ ಸಿಂಗಲ್ ರನ್‌ಗೆ ಕರೆ ನೀಡಿದಾಗ ಮ್ಹಾತ್ರೆ ನೋವಿನಲ್ಲೇ ಓಡಿ ರನೌಟ್‌ನಿಂದ ಪಾರಾಗಿದ್ದರು. ಮುಂದಿನ ಎಸೆತದಲ್ಲೇ ಅನಿವಾರ್ಯವಾಗಿ ದೊಡ್ಡ ಹೊಡೆತಕ್ಕೆ ಕೈಹಾಕಿ 30 ರನ್‌ಗಳಿಗೆ ಔಟಾದರು.
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. “ಮ್ಹಾತ್ರೆ ತೀವ್ರವಾಗಿ ಕುಂಟುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಫಿಸಿಯೋಗಳು ಮೈದಾನಕ್ಕೆ ಬಂದು ಪರೀಕ್ಷಿಸಿದ ನಂತರವೂ ಕ್ರೀಸ್‌ನಲ್ಲಿ ಮುಂದುವರಿಸಿದ್ದು ಮತ್ತು ಓಡುವಂತೆ ಮಾಡಿದ್ದು ನನಗೆ ಆಘಾತ ತಂದಿದೆ. ನೋವಿನಿಂದ ನಿವೃತ್ತಿ (Retired Hurt) ಹೊಂದಬೇಕಿತ್ತು,” ಎಂದು ಅಶ್ವಿನ್ ಹೇಳಿದ್ದಾರೆ.
ತಮ್ಮ ಟೀಕೆಯನ್ನು ಮುಂದುವರಿಸಿದ ಅಶ್ವಿನ್, ಸಿಎಸ್‌ಕೆ ತಂಡದಲ್ಲಿ ಆಟಗಾರರ ಗಾಯದ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದ್ದಾರೆ. “ದೀಪಕ್ ಚಹಾರ್ ಮುಂಬೈ ಇಂಡಿಯನ್ಸ್ ಪರ ಸತತ ಪಂದ್ಯಗಳನ್ನು ಆಡಿದ್ದರು, ಆದ್ರೆ ಸಿಎಸ್‌ಕೆಗೆ ಬಂದ ಮೇಲೆ ಕಳೆದ 3 ವರ್ಷಗಳಲ್ಲಿ ಕೇವಲ 16 ಪಂದ್ಯ ಆಡಿದ್ದಾರೆ. ಆಟಗಾರರ ಫಿಟ್‌ನೆಸ್ ಕಾಪಾಡುವುದು ಕೇವಲ ಟೂರ್ನಿ ಆರಂಭದಲ್ಲಿ ಮಾತ್ರವಲ್ಲ, ವರ್ಷಪೂರ್ತಿ ನಡೆಯುವ ಪ್ರಕ್ರಿಯೆಯಾಗಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡವು ತಮ್ಮ ಗಾಯದ ಸಮಯದಲ್ಲಿ ಹೇಗೆ ಕಾಳಜಿ ವಹಿಸಿತ್ತು ಎಂಬುದನ್ನು ನೆನಪಿಸಿಕೊಂಡ ಅಶ್ವಿನ್, ಪ್ರತಿಭಾವಂತ ಆಟಗಾರರನ್ನು ಮಾರುಕಟ್ಟೆಯಲ್ಲಿ ಹುಡುಕಲು ಸಾಧ್ಯವಿಲ್ಲ, ತಂಡವು ಜಾಗರೂಕತೆಯಿಂದ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಮ್ಹಾತ್ರೆಯವರಂತಹ ಉದಯೋನ್ಮುಖ ತಾರೆಯನ್ನು ಇಷ್ಟು ಅಜಾಗರೂಕತೆಯಿಂದ ನಡೆಸಿಕೊಂಡಿದ್ದಕ್ಕೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಪ್ರತಿಯೊಬ್ಬರೂ ದಂಗಾಗಿದ್ದರು ಎಂದು ತಿಳಿಸಿದ್ದಾರೆ.























